ಕಾಸರಗೋಡು: ಮಹಿಳಾ ಗೋಡೆ ಸಂದರ್ಭ ಹಿಂಸಾಚಾರ; ಕಲ್ಲೆಸೆತದಿಂದ ನಾಲ್ವರಿಗೆ ಗಾಯ
ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಾಟ

ಕಾಸರಗೋಡು, ಜ.2: ಮಂಗಳವಾರ ಸಂಜೆ ನಡೆದ ಮಹಿಳಾ ಗೋಡೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಬಸ್ಸು, ವಾಹನಗಳ ಮೇಲೆ ಕಲ್ಲೆಸೆದ ಘಟನೆ ಕುದ್ರೆಪ್ಪಾಡಿ ಎಂಬಲ್ಲಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಕೃತ್ಯದ ಹಿಂದೆ ಬಿಜೆಪಿ-ಸಂಘ ಪರಿವಾರ ಕಾರ್ಯಕರ್ತರು ಕೈವಾಡ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಾಸರಗೋಡಿನಿಂದ ಅಂಗಡಿಮೊಗರಿಗೆ ತೆರಳುತ್ತಿದ್ದ ಬಸ್ಸಿನ ಮೇಲೆ ಕುದ್ರೆಪ್ಪಾಡಿಯಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಪರಿಣಾಮ ಪುತ್ತಿಗೆ ಕಂದಾಲ್ ನ ಅವ್ವಾಬಿ(35), ಪುತ್ತಿಗೆಯ ಸರಸ್ವತಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರಾದ ಪುತ್ತಿಗೆಯ ಬಿಂದೂ(36) ಹಾಗೂ ಪೆರ್ಲಡ್ಕದ ಪಿ.ಎಂ.ಅಬ್ಬಾಸ್ (45) ಎಂಬವರು ಗಾಯಗೊಂಡಿದ್ದು ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಸ್ವತಿ ಮತ್ತು ಅವ್ವಾಬಿಯವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದಬಂದಿದೆ.
ಇದೇವೇಳೆ ಚೇಟುಕುಂಡುವಿನಲ್ಲಿ ಮಹಿಳಾ ಗೋಡೆ ಕಾರ್ಯಕ್ರಮವನ್ನು ವಿಫಲಗೊಳಿಸಲು ದುಷ್ಕರ್ಮಿಗಳು ಯತ್ನಿಸಿದ ಘಟನೆ ನಡೆದಿದೆ. ಮಹಿಳಾ ಗೋಡೆಗೆ ಆಗಮಿಸಿದವರ ಮೇಲೆ ಕಲ್ಲೆಸೆಯಲಾಗಿದೆ. ಈ ಸಂದರ್ಭದಲ್ಲಿ ಸಿಪಿಎಂ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹಿಂಸಾಚಾರ ನಡೆಯಿತು. ಸ್ಥಳಕ್ಕೆ ತಲಪಿದ ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನಿಯಂತ್ರಿಸಲು ಪೊಲೀಸರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕಲ್ಲೆಸೆತದಿಂದ ಪೊಲೀಸರು, ಬಿಜೆಪಿ, ಸಿಪಿಎಂ ಕಾರ್ಯಕರ್ತರು ಗಾಯಗೊಂಡಿದ್ದಾರೆ. ವರದಿಗಾರರ ಮೇಲೂ ಹಲ್ಲೆ ನಡೆಸಿದ್ದು, ಎರಡು ಖಾಸಗಿ ವಾಹಿನಿಗಳ ಕ್ಯಾಮರಾಗಳಿಗೆ ಹಾನಿ ಎಸಗಲಾಗಿದೆ.
ಚೇಟುಕುಂಡುವಿನಲ್ಲಿ ಮಹಿಳಾ ಗೋಡೆ ಹಾದುಹೋಗುವ ರಸ್ತೆ ಬದಿಯ ಹುಲ್ಲು, ಪೊದೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಡ್ಡಿಪಡಿಸಲು ಯತ್ನಿಸಿದ ಘಟನೆ ವರದಿಯಾಗಿದೆ. ಇದರಿಂದ ಪರಿಸರದಲ್ಲಿ ದಟ್ಟಹೊಗೆ ಆವರಿಸಿತ್ತು.
ಅಹಿತಕರ ಘಟನೆ ಹಿನ್ನಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ 200ರಷ್ಟು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.