ಪೊಲೀಸರ ಬಗ್ಗೆ ಸಾರ್ವಜನಿಕರ ಭಯ ಹೋಗಲಾಡಿಸುವ ಪ್ರಯತ್ನ: ನೂತನ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್

ಮಂಗಳೂರು, ಜ.2: ಸಾರ್ವಜನಿಕರಿಗೆ ಪೊಲೀಸರ ಮತ್ತು ಪೊಲೀಸ್ ಠಾಣೆಗಳ ಬಗ್ಗೆ ಭಯವಿದೆ. ಅದನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು ಎಂದು ದ.ಕ.ಜಿಲ್ಲಾ ನೂತನ ಎಸ್ಪಿ ಬಿ.ಎಂ.ಲಕ್ಷ್ಮಿ ಪ್ರಸಾದ್ ಹೇಳಿದರು.
ದ.ಕ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಸಂವಹನದ ಕೊರತೆ ಇದೆ. ಇದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಸಮಾಜಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲೂ ಸಾರ್ವಜನಿಕರು ಆತಂಕಿಸುತ್ತಾರೆ. ಇದನ್ನು ತಪ್ಪಿಸಲು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ಹೊತ್ತುಕೊಂಡು ನಿರ್ಭೀತಿಯಿಂದ ಠಾಣೆಗೆ ಹೋಗಲು ಸಾಧ್ಯವಿದೆ. ಭಯ ಹೋಗಲಾಡಿಸುವುದರೊಂದಿಗೆ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡಿಸುವ ವಾತಾವರಣವನ್ನೂ ಸೃಷ್ಟಿಸುವ ಅಗತ್ಯವಿದೆ ಎಂದರು.
ಜಿಲ್ಲೆಯ ವಿವಿಧೆಡೆ ಈಗಾಗಲೆ ಬೀಟ್ ಪೊಲೀಸ್ ವ್ಯವಸ್ಥೆ ಇದೆ. ಅದನ್ನು ವ್ಯವಸ್ಥಿತವಾಗಿ ನಡೆಸಲಾಗುವುದು. ಜನರ ಸಮಸ್ಯೆಗಳನ್ನು ಆಲಿಸುವ ವ್ಯವಧಾನ ಪೊಲೀಸ್ ಇಲಾಖೆಯಲ್ಲಿ ಕಡಿಮೆಯಾಗಿದೆ. ಸಮಸ್ಯೆ ಆಲಿಸಿದರಷ್ಟೇ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಅತ್ಯಂತ ಸಂಯಮದಿಂದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದು ಬಿ.ಎಂ.ಲಕ್ಷ್ಮಿ ಪ್ರಸಾದ್ ನುಡಿದರು.
ದಕ್ಷಿಣ ಕನ್ನಡ ಅತೀ ಸೂಕ್ಷ್ಮ ಜಿಲ್ಲೆ ಎಂಬುದು ತಿಳಿದಿದೆ. ಸಮಸ್ಯೆಗಳು ಆದಾಗ ಅಥವಾ ಸವಾಲುಗಳು ಎದುರಾದಾಗ ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದ ಎಸ್ಪಿ ಲಕ್ಷ್ಮಿಪ್ರಸಾದ್, ಜಿಲ್ಲೆಯಲ್ಲಿ ಮರಳುಗಾರಿಕೆ, ಗಾಂಜಾ ಸಹಿತ ಮಾದಕ ದ್ರವ್ಯ ಜಾಲವು ಪೊಲೀಸ್ ಇಲಾಖೆಗೆ ಸವಾಲಾಗಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಅವುಗಳನ್ನು ಮಟ್ಟ ಹಾಕಲಾಗುವುದು ಎಂದರು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮೊದಲಿನಂತಿಲ್ಲ. ಅದನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಲಾಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ ಈಗ ನಕ್ಸಲ್ ಚಟುವಟಿಕೆ ಅಷ್ಟೇನು ಇಲ್ಲ. ಇದಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಸಿಕ್ಕಿದೆ ಎಂದು ಲಕ್ಷ್ಮಿಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭ ಹೆಚ್ಚುವರಿ ಎಸ್ಪಿ ಸಜಿತ್ ವಿ.ಜೆ. ಉಪಸ್ಥಿತರಿದ್ದರು.