ಜ.6ರಂದು ಮೀನುಗಾರಿಕೆ ಸ್ಥಗಿತ- ರಾ.ಹೆದ್ದಾರಿ ತಡೆ ಹೋರಾಟ
ಬೋಟು ಸಹಿತ ಮೀನುಗಾರ ನಾಪತ್ತೆ ಪ್ರಕರಣ

ಉಡುಪಿ, ಜ. 2: ಕಳೆದ 19 ದಿನಗಳಿಂದ ಕಣ್ಮರೆಯಾಗಿರುವ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ಜ.6ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ 66ರ ತಡೆ ಹೋರಾಟ ನಡೆಸುವ ಬಗ್ಗೆ ಮಲ್ಪೆ ಮೀನುಗಾರರ ಸಂಘ ತೀರ್ಮಾನಿಸಿದೆ.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸಂಘಟನೆಗಳು ಬುಧವಾರ ಮಲ್ಪೆ ಬಂದರಿನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಒಕ್ಕೋರಲಿನ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಸರಕಾರಗಳು ಮೀನುಗಾರರನ್ನು ನಿರ್ಲಕ್ಷ ಮಾಡುತ್ತಿದೆ. ಆದುದ ರಿಂದ ಮೀನುಗಾರರ ಬಲವನ್ನು ಸರಕಾರಕ್ಕೆ ತೋರಿಸಬೇಕಾಗಿದೆ. ಬಿಸಿ ಮುಟ್ಟಿ ಸುವ ಮೂಲಕ ಸರಕಾರವೇ ನಮ್ಮ ಬಳಿಗೆ ಬರುವಂತೆ ಮಾಡಬೇಕು. ಮೀನು ಗಾರರ ನಾಪತ್ತೆಯಿಂದ ಇಡೀ ಮೀನುಗಾರ ಸಮುದಾಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದರು.
ಜ.6ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ಮೂರು ಜಿಲ್ಲೆಯ ಮೀನು ಗಾರರು ಬೆಳಗ್ಗೆ 8.30ಕ್ಕೆ ಮಲ್ಪೆ ಬಂದರಿನಲ್ಲಿ ಜಮಾಯಿಸಿ, ನಂತರ ಅಲ್ಲಿಂದ ಪಾದಯಾತ್ರೆಯ ಮೂಲಕ ಕರಾವಳಿ ಬೈಪಾಸ್‌ಗೆ ತೆರಳಿ ಅಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು. ಇದರಲ್ಲಿ ಮೂರು ಜಿಲ್ಲೆಯ 25ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸರಕಾರಗಳ ವಿರುದ್ಧ ಆಕ್ರೋಶ: ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ ಮಾತನಾಡಿ, ನಾಪತ್ತೆಯಾದವರ ಹುಡುಕಾಟದ ಎಲ್ಲ ಪ್ರಯತ್ನಗಳು ವಿಫಲವಾಗಿದೆ. ಇಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನುಗಾರರ ಬಗ್ಗೆ ಸರಕಾರ ತಿರಸ್ಕಾರ ಭಾವನೆ ತೋರಿಸುತ್ತಿದೆ. ಈ ಹೋರಾಟದಲ್ಲಿ ಕಾರವಾರದಿಂದ ಮಂಗಳೂರಿನ ವರೆಗೆ ಎಲ್ಲ ಮೀನುಗಾರರು ಕೈಜೋಡಿಸಬೇಕು. ಇದರಲ್ಲಿ ನಾವು ಜೈಲಿಗೆ ಹೋಗಲು ಕೂಡ ಸಿದ್ಧರಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವಿಭಜಿತ ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಸರಕಾರ ಮೀನುಗಾರರ ಬದುಕಿನಲ್ಲಿ ಚೆಲ್ಲಾಟ ಆಡು ತ್ತಿದೆ. ಈ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಬೇಕು. ಮೀನುಗಾರರ ತಾಳ್ಮೆ ಪರೀಕ್ಷಿಸಿದರೆ ಸರಕಾರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ದೂರಿದರು.
ಮಂಗಳೂರು ಪರ್ಸಿನ್ ಮೀನುಗಾರರ ಸಂಘದ ಇಬ್ರಾಹಿಂ ಬೆಂಗ್ರೆ, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬೈಂದೂರು ವಲಯ ನಾಡದೋಣಿ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಮೀನುಗಾರ ಮುಖಂಡರಾದ ರಾಮ ಕಾಂಚನ್, ರಾಮ ಅಮೀನ್, ಗೋಪಾಲ್ ಭಟ್ಕಳ್, ನಿತೀಶ್ ಕುಮಾರ್, ವಾಸುದೇವ ಬೊಳೂರು, ಗುರುದಾಸ್ ಬಂಗೇರ, ಬಿ.ಬಿ. ಕಾಂಚನ್, ರಮೇಶ್ ಗಂಗೊಳ್ಳಿ, ಮಂಜು ಬಿಲ್ಲವ, ರವಿರಾಜ್ ಸುವರ್ಣ, ಗುಂಡು ಬಿ.ಅಮೀನ್ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಸಭೆಯಲ್ಲಿ ಹಸಿ ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ವಿವಿಧ ಸಂಘಟನೆಗಳ ಮುಖಂಡರಾದ ಹರಿಶ್ಚಂದ್ರ ಕಾಂಚನ್, ಸುಧಾಕರ್ ಕುಂದರ್, ರಾಘವ, ರವಿ ಸುವರ್ಣ, ಜನಾರ್ದನ ತಿಂಗಳಾಯ, ಜಲಜ ಕೋಟ್ಯಾನ್, ನಾಗರಾಜ್ ಸುವರ್ಣ, ನಿತಿನ್ ಕುಮಾರ್ ಮಂಗಳೂರು, ಮೋಹನ್ ತಿಂಗಳಾಯ, ವಿಜಯ ಬಂಗೇರ ಹೆಜಮಾಡಿ, ಪ್ರಶಾಂತ್ ಕುಮಾರ್, ಶಶಿಧರ್ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು. ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ಗೋಪಾಲ ಆರ್.ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಾವಿರಾರು ಬೋಟುಗಳು ಲಂಗಾರು
ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾವಿರಾರು ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿವೆ.
‘ಕಳೆದ 8-9 ದಿನಗಳಿಂದ ಬೋಟುಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಸುಮಾರು 1000ಕ್ಕೂ ಅಧಿಕ ಆಳ ಸಮುದ್ರ ಬೋಟುಗಳು ಹಾಗೂ 130 ಪರ್ಸಿನ್ ಬೋಟುಗಳು ಮಲ್ಪೆ ಬಂದರಿನಲ್ಲೇ ಉಳಿದುಕೊಂಡಿವೆ. ಸಣ್ಣ ಸಣ್ಣ ಬೋಟುಗಳು ಮಾತ್ರ ಮೀನುಗಾರಿಕೆ ಮಾಡುತ್ತಿವೆ’ ಎಂದು ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.