ಆರ್‌ಡಿಪಿಆರ್ ಪ್ರ. ಕಾರ್ಯದರ್ಶಿ ಅತೀಕ್ ರಿಗೆ ಮಾತೃ ವಿಯೋಗ

ಮಂಗಳೂರು, ಜ.2: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್)ಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರ ತಾಯಿ ಖುರ್ಶೀದುನ್ನೀಸ (89) ಬುಧವಾರ ಅಪರಾಹ್ನ 3:15ಕ್ಕೆ ಮೈಸೂರಿನ ಬೋಗಾದಿಯಲ್ಲಿರುವ ಪುತ್ರನ ನಿವಾಸದಲ್ಲಿ ನಿಧನರಾದರು.
ಇವರ ಪತಿ ದಿ. ಖಲೀಮುಲ್ಲಾ ಖಾನ್ ಸರಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿದ್ದರು. ಇವರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಮೃತರು ಮೂಲತಃ ಮೈಸೂರಿನವರು.
ಮೃತರ ಪುತ್ರ ಎಲ್.ಕೆ. ಅತೀಕ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕವಿ, ಅನುವಾದಕರಾಗಿದ್ದಾರೆ. ಹಿರಿಯ ಪುತ್ರ ಖಜಾನೆ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದು, ಹಿರಿಯ ಪುತ್ರಿ ಉರ್ದು ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ಮತ್ತೋರ್ವ ಪುತ್ರಿ ಇಎಸ್‌ಐ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ನಿವೃತ್ತಿಯಾಗಿದ್ದಾರೆ. ಮತ್ತೋರ್ವ ಪುತ್ರ ಮಣಿಪಾಲದಲ್ಲಿ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜ. 3ರಂದು ಮೈಸೂರಿನಲ್ಲಿ ನಡೆಯಲಿದೆ.