ಜ.8-9ರಂದು ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ದೇಶವ್ಯಾಪಿ ಮುಷ್ಕರ
ಮಂಗಳೂರು, ಜ.2: ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಖಾಸಗೀಕರಣ, ಗುತ್ತಿಗೆ ಪದ್ಧತಿ, ನಿಗದಿತ ಅವಧಿ ಉದ್ಯೋಗ ಮುಂತಾದ ಕೇಂದ್ರ ಸರಕಾರದ ಕ್ರಮಗಳನ್ನು ವಿರೋಧಿಸಿ ಜ.8 ಮತ್ತು 9 ರಂದು ದೇಶಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಜಿಲ್ಲಾ ಸಂಚಾಲಕ ಎಚ್.ವಿ.ರಾವ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ವಿರೋಧಿ ನೀತಿಗಳನ್ನು ವಿರೋಧಿಸಿ 12 ಅಂಶಗಳ ಬೇಡಿಕೆ ಪಟ್ಟಿಯನ್ನು ದೇಶದ ಎಲ್ಲ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೇಂದ್ರ ಸರಕಾರದ ಮುಂದಿಟ್ಟು ಅವುಗಳ ಬೇಡಿಕೆಗಾಗಿ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಕೇಂದ್ರ ಸರಕಾರ ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಈ ಕುರಿತು ದೇಶದ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಕೈಗಾರಿಕೆ- ಸೇವಾ ಕ್ಷೇತ್ರದ ಕಾರ್ಮಿಕರ ಸಂಘಟನೆಗಳು ಮತ್ತು ಉದ್ಯೋಗಿಗಳ ಸ್ವತಂತ್ರ ಒಕ್ಕೂಟಗಳು ಜಂಟಿಯಾಗಿ ಕಳೆದ ಸೆಪ್ಟಂಬರ್‌ನಲ್ಲಿ ನವದಿಲ್ಲಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿವೆ. ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜ.8 ಮತ್ತು 9ರಂದು ಎರಡು ದಿನಗಳ ಪೂರ್ಣ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜೆಸಿಟಿಯು ದ.ಕ. ಜಿಲ್ಲಾ ಸಮಿತಿ ಎರಡು ದಿನಗಳ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿದೆ.ಮುಷ್ಕರಕ್ಕೆ ಪೂರ್ವಭಾವಿಯಾಗಿ ಕಾರ್ಮಿಕ ವರ್ಗ ವ್ಯಾಪಕ ತಯಾರಿ ನಡೆಸಿ ಮುಷ್ಕರದ ಪೂರ್ಣ ಯಶಸ್ವಿಗೆ ಪಣತೊಟ್ಟಿದೆ. ಇದಕ್ಕೆ ಸಾರ್ವಜನಮಿಕರಿಂದಲೂ ಉತ್ತಮ ಪ್ರತ್ಕಿರಿಯೆ ವ್ಯಕ್ತವಾಗಿದೆ. ಜಿಲ್ಲೆ ಎಲ್ಲ ನಾಗರಿಕರು ಮುಷ್ಕರದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜೆಸಿಟಿಯುನಿಂದ ನಡೆಸುತ್ತಿರುವ ಮುಷ್ಕರಕ್ಕೆ ಇಂಟಕ್, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಯುಟಿಯುಸಿ, ಬ್ಯಾಂಕ್, ಇನ್ಶುರೆನ್ಸ್, ಪೋಸ್ಟ್, ಆರ್‌ಎಂಎಸ್, ರೈಲ್ವೆ, ಬಿಎಸ್ಸೆನ್ನೆಲ್, ಸರಕಾರಿ ನೌಕರರು, ಸಾರಿಗೆ ನೌಕರರು, ಬಸ್, ಆಟೊ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ 18 ಸಾವಿರ ರೂ.ಗೆ ಹೆಚ್ಚಿಸುವುದು, ಕಾರ್ಮಿಕರ ಹಿತಾಸಕ್ತಿಗಳ ವಿರುದ್ಧವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವಂತಿಲ್ಲ. ಗುತ್ತಿಗೆ ಮತ್ತು ದಿನಗೂಲಿ ಕಾರ್ಮಿಕರನ್ನು ಖಾಯಂ ಮಾಡಬೇಕು. ಹೊರಗುತ್ತಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಬೈಕ್ ಜಾಥಾ: ಇದೇ ಜ.8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಸಾರಿಗೆ ನೌಕರರು, ಬಸ್, ಆಟೊ ಚಾಲಕರು ಬೆಂಬಲ ನೀಡುತ್ತಿದ್ದು, ಜಿಲ್ಲೆಯ ಎಲ್ಲ ಭಾಗದಲ್ಲೂ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗುವುದು. ಈ ಮುಲಕ ಎಲ್ಲ ಕಾರ್ಮಿಕರೂ ಮುಷ್ಕರದಲ್ಲಿ ಪಾಲ್ಗೊಂಡಂತಾಗುತ್ತದೆ ಎಂದು ಜೆಸಿಟಿಯು ಜಿಲ್ಲಾ ಸಂಚಾಲಕ ಎಚ್.ವಿ.ರಾವ್ ತಿಳಿಸಿದರು.
ಮುಷ್ಕರಕ್ಕೆ ಸಾರಿಗೆ ನೌಕರರ ಬೆಂಬಲ: ರಸ್ತೆ ಸಾರಿಗೆ ರಂಗ ತೀವ್ರ ಬಿಕ್ಕಟ್ಟಿಗೆ ಒಳಗಾಗಿದೆ. 2014ರಿಂದ ಕೇಳರಿಯದಷ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಇನ್ಸೂರೆನ್ಸ್ ಪ್ರೀಮಿಯಂನ್ನು ತೀವ್ರವಾಗಿ ಏರಿಸಲಾಗಿದೆ. ಟೋಲ್‌ಚಾರ್ಜ್, ತೆರಿಗೆ, ಬೆಲೆ ಏರಿಕೆ ಇತ್ಯಾದಿ ಕೆಲಸದ ಅಭದ್ರತೆ ಈ ಎಲ್ಲ ವಿಷಯಗಳು ಬಿಕ್ಕಟ್ಟಿಗೆ ಕಾರಣವಾಗಿದ್ದು, ಸಾರಿಗೆ ನೌಕರರು ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಮೋರ್ರ್ ಟ್ರಾನ್ಸ್‌ಪೋರ್ಟ್ ಆ್ಯಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್- ಸಿಐಟಿಯು ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ತರಂಜನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುನೀಲ್‌ಕುಮಾರ್ ಬಜಾಲ್, ಸುರೇಶ್ ಬಳ್ಳಾಲ್, ಮಾಧವ ಮತ್ತಿತರರು ಉಪಸ್ಥಿತರಿದ್ದರು.