ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿದ ಕೇರಳ ಸರಕಾರ: ಆರೋಪ
ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶ ಘಟನೆ

ಮಂಗಳೂರು, ಜ. 2: ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರವು ಇಬ್ಬರು ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಶಬರಿಮಲೆ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಕೇರಳ ಸರಕಾರ ಉಲ್ಲಂಸಿದೆ ಎಂದು ಅಯ್ಯಪ್ಪ ಭಕ್ತ ವೃಂದ ಮಂಗಳೂರು ಘಟಕ ಆರೋಪಿಸಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಜಾರಿಗೆ ತರಾತುರಿ ನಡೆಸಿದ ಕೇರಳ ಸರಕಾರ, ಹಠಕ್ಕೆ ಬಿದ್ದು ಮಹಿಳೆಯರನ್ನು ದೇವಸ್ಥಾನದೊಳಗೆ ಕರೆದೊಯ್ದಿದೆ. ಇದೇ ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎನ್ನುವ ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲಂಘಿಸಲಾಗಿದೆ ಎಂದು ಅಯ್ಯಪ್ಪ ಭಕ್ತ ವೃಂದ ಮಂಗಳೂರು ಘಟಕ ಅಧ್ಯಕ್ಷ ಗಣೇಶ ಪೊದುವಾಳ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಾಸ್ತಿಕವಾದಿಗಳ ಷಡ್ಯಂತ್ರ: ಉತ್ತರ ಭಾರತೀಯರು ಸಲ್ಲಿಸಿದ ಅರ್ಜಿ ಆಧಾರದಲ್ಲಿ ಶಬರಿಮಲೆ ಆಚಾರ ವಿಚಾರ ತಿಳಿಯದ ಸುಪ್ರೀಂಕೋರ್ಟ್ ನ್ಯಾಯಾ ಧೀಶರು ಇಂತಹ ತೀರ್ಪು ನೀಡಿರುವುದು ಸರಿಯಲ್ಲ. ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಿರುವುದು ಹಿಂದೂ ಧರ್ಮಕ್ಕೆ ಮಾಡಿರುವ ಅನ್ಯಾಯ. ಇದು ಹಿಂದೂ ಧರ್ಮ ನಾಶ ಮಾಡಲು ನಾಸ್ತಿಕವಾದಿಗಳು ನಡೆಸಿದ ಷಡ್ಯಂತ್ರ ಎಂದು ಅಯ್ಯಪ್ಪ ಭಕ್ತ ವೃಂದ ಮಂಗಳೂರು ಘಟಕ ಅಧ್ಯಕ್ಷ ಗಣೇಶ ಪೊದುವಾಳ್ ಆರೋಪಿಸಿದರು.
ಕೇರಳದಲ್ಲಿ ಇತ್ತೀಚೆಗೆ ನಡೆದ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮದಲ್ಲಿ 8 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಕಮ್ಯುನಿಸ್ಟ್ ಪ್ರಾಬಲ್ಯದ ಜಿಲ್ಲೆಗಳಲ್ಲೂ ಜನರು ಶಬರಿಮಲೆ ಸಂಪ್ರದಾಯದ ಪರವಾಗಿ ಧ್ವನಿಯೆತ್ತಿದ್ದರು. ಇನ್ನೊಂದೆಡೆ ಸರಕಾರವೇ ಆಯೋಜಿಸಿದ್ದ ಮಹಿಳಾ ಗೋಡೆಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಇದು ಕಮ್ಯುನಿಸ್ಟ್ ಸರಕಾರಕ್ಕೆ ನಡುಕ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರವೇ ಗೌಪ್ಯವನ್ನು 50 ವರ್ಷದೊಳಗಿನ ಮಹಿಳೆಯರನ್ನು ಪೊಲೀಸ್ ರಕ್ಷಣೆಯಲ್ಲಿ ಶಬರಿಮಲೆ ಸನ್ನಿಧಾನಕ್ಕೆ ಕಳುಹಿಸಿಕೊಟ್ಟಿದೆ. ಇದಕ್ಕೆ ಕೇರಳ ಸರಕಾರ ಮತ್ತು ಸಿಪಿಎಂ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಸಿದರು.
ಪರಶುರಾಮ ಸೃಷ್ಟಿಸಿದ ದೇವಾಲಯಗಳ ಪೈಕಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಾತ್ರ 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಬ್ರಹ್ಮಚಾರಿಯಾದ ಅಯ್ಯಪ್ಪನ ವೃತದಲ್ಲಿ ಭಂಗ ಉಂಟಾಗಬಾರದು ಎಂಬ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ. ಇಲ್ಲಿ ಮಹಿಳಾ ಸಮಾನತೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಶಬರಿಮಲೆ ವಿಷಯದಲ್ಲಿ ಪಿಣರಾಯಿ ವಿಜಯನ್ ಸರಕಾರ ತಪ್ಪು ಹೆಜ್ಜೆ ಇಟ್ಟಿದೆ. ಆ ಮೂಲಕ ಪಿಣರಾಯಿ ವಿಜಯನ್ ಕೇರಳದಲ್ಲಿ ಸಿಪಿಎಂ ಪಕ್ಷದ ಅಧಃಪತನಕ್ಕೆ ಕಾರಣರಾಗುತ್ತಿದ್ದಾರೆ ಎಂದು ಕೇರಳದ ಮಾಜಿ ಸಿಎಂ ವಿ.ಎಸ್. ಅಚ್ಯುತಾನಂದನ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನಿಜವಾಗಲಿದೆ. ಅಯ್ಯಪ್ಪ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಕಾರಣ ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರವೇ ಸಿಪಿಎಂನ ಕೊನೆಯ ಸರಕಾರವಾಗಲಿದೆ ಎಂದು ಗಣೇಶ್ ಪೊದುವಾಳ್ ಹೇಳಿದರು.
ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ವಿಶ್ವನಾಥ ಗುರುಸ್ವಾಮಿ, ಮರೋಳಿ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್, ಶರತ್ ಕೆಂಬಾರು, ಗುರುಸ್ವಾಮಿಗಳಾದ ರಾಜೇಶ್ ಕೆರೆಬೈಲ್, ಪುರುಷೋತ್ತಮ ಕಲ್ಲಾಪು, ಮೋಹನ ಪಡೀಲ್, ಮಾಜಿ ಕಾರ್ಪೋರೇಟರ್ ಭಾಸ್ಕರಚಂದ್ರ ಶೆಟ್ಟಿ, ಬೊಕ್ಕಪಟ್ಣ ಅಯ್ಯಪ್ಪ ದೇವಸ್ಥಾನ ಟ್ರಸ್ಟಿ ಮೋಹನ್ ಬರ್ಕೆ ಉಪಸ್ಥಿತರಿದ್ದರು.
ಜ.3ರಂದು ಪ್ರತಿಭಟನೆ
ಶಬರಿಮಲೆಗೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಕ್ರಮ ಖಂಡಿಸಿ, ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಶಬರಿಮಲೆ ಸಂರಕ್ಷಣಾ ವೇದಿಕೆ ಜ.3ರಂದು ಮಂಗಳೂರಿನಲ್ಲಿ ಆಯೋಜಿಸಲಿರುವ ಪ್ರತಿಭಟನೆಗೆ ಅಯ್ಯಪ್ಪ ಭಕ್ತ ವೃಂದ ಮಂಗಳೂರು ಘಟಕ ಪೂರ್ಣ ಬೆಂಬಲ ನೀಡಲಿದೆ ಎಂದು ಅಯ್ಯಪ್ಪ ವೃತಧಾರಿ ಶರತ್ ಕೆಂಬಾರು ತಿಳಿಸಿದರು.







