ಜ.4 ರಂದು ಡಿಸಿಎಂ ಪರಮೇಶ್ವರ್ ಮನೆ ಎದುರು ಧರಣಿ
ಬೆಂಗಳೂರು, ಜ.2: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ನೀಡಿದ್ದ ಗೃಹಖಾತೆಯನ್ನು ಕಸಿದುಕೊಂಡಿರುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಂಯೋಜಿತ) ವತಿಯಿಂದ ಜ.4 ರಂದು ಡಿಸಿಎಂ ಮನೆ ಎದುರು ಧರಣಿ ನಡೆಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಯಮರೆ ಶಂಕರ್, ಪರಿಶಿಷ್ಟರಿಗೆ ನೀಡಿದ್ದ ಪ್ರಮುಖ ಖಾತೆಯನ್ನು ಕಸಿದುಕೊಂಡು ಉದ್ದೇಶಪೂರ್ವಕವಾಗಿ ದಲಿತರನ್ನು ರಾಜಕೀಯದಿಂದ ಮೂಲೆಗುಂಪು ಮಾಡಲು ಕಾಂಗ್ರೆಸ್ ಮುಂದಾಗಿದೆ. ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರಿಗೆ ನೀಡಿದ್ದ ಪ್ರಮುಖ ಖಾತೆಯನ್ನೂ ಕಸಿದುಕೊಂಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಅನೇಕ ದಲಿತ ನಾಯಕರು ಮುಖ್ಯಮಂತ್ರಿಯಾಗಲು ಅರ್ಹತೆಯುಳ್ಳವರಿದ್ದರೂ ಸಿಎಂ ಮಾಡಲು ಮುಂದಾಗಲಿಲ್ಲ. ದಲಿತ ಸಮುದಾಯವನ್ನು ಸಮಾಧಾನ ಪಡಿಸಲು ಡಿಸಿಎಂ ಸ್ಥಾನ ನೀಡಿದ್ದರೂ, ಅವರಿಂದ ಉನ್ನತ ಸ್ಥಾನವನ್ನು ಕಸಿದುಕೊಂಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಲಹಂಕ ವ್ಯಾಪ್ತಿಯ ಚಿಕ್ಕಜಾಲ ಹೋಬಳಿಯ ಹುತ್ತನಹಳ್ಳಿ ಸರ್ವೆ ನಂ.23, 72, 73 ರ ಜಮೀನಿನಲ್ಲಿ ದಲಿತರಿಗೆ ನಿವೇಶನಗಳಲ್ಲಿ ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.







