ಉಡುಪಿ: ಕರ್ನಾಟಕ ಬ್ಯಾಂಕ್ ಎಟಿಎಂ ಸ್ಥಳಾಂತರ

ಉಡುಪಿ, ಜ.2: ನಗರದ ರಥಬೀದಿಯಲ್ಲಿರುವ ಕರ್ನಾಟಕ ಬ್ಯಾಂಕಿನ ಎಟಿಎಂ ಅನ್ನು ಅಣ್ಣಯ್ಯಾಚಾರ್ಯ ಮಠದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಅದನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರು ಬುಧವಾರ ಉದ್ಘಾಟಿಸಿದರು.
‘ಬ್ಯಾಂಕ್ ಎನ್ನುವುದು ಮಾನವನ ಆತ್ಮ ಇದ್ದಂತೆ, ಸಮಾಜ ಎನ್ನುವುದು ಮಾನವನ ಶರೀರವಿದ್ದಂತೆ. ಒಂದಕ್ಕೊಂದು ಪರಸ್ಪರ ಸಂಬಂಧವಿದ್ದು ಎರಡು ಇದ್ದರೆ ಮಾತ್ರ ಮಾನವನಾಗಿರಲು ಸಾಧ್ಯ.’ ಎಂದು ಪಲಿಮಾರುಶ್ರೀಗಳು ತಮ್ಮ ಉದ್ಘಾಟನಾ ಮಾತುಗಳಲ್ಲಿ ತಿಳಿಸಿದರು.
ಕರ್ನಾಟಕ ಬ್ಯಾಂಕ್ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ತಮ್ಮ ಶಾಖೆಗಳಿಂದ ಗ್ರಾಹಕರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಸೇವೆ ನೀಡುತಿದ್ದಾರೆ. ಇದು ಉತ್ತಮ ರೀತಿಯಲ್ಲಿ ನಡೆದು ಅಭಿವೃದ್ಧಿ ಹೊಂದಲಿ ಎಂದು ಅವರು ತಮ್ಮ ಅನುಗ್ರಹ ಭಾಷಣದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಅಧ್ಯಕ್ಷರಾದ ಪಿ.ಜಯರಾಮ ಭಟ್, ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್, ಸಹಾಯಕ ಮಹಾ ಪ್ರಬಂಧಕ ಗೋಪಾಲಕೃಷ್ಣ ಸಾಮಗ, ಪಿಆರ್‌ಓ ಶ್ರೀನಿವಾಸ ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಸ್ವಾಗತಿಸಿದರು. ಸಹಾಯಕ ಮಹಾ ಪ್ರಬಂಧಕ ಗೋಪಾಲಕೃಷ್ಣ ಸಾಮಗ ಕಾರ್ಯಕ್ರಮ ನಿರೂಪಿಸಿ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ವಾದಿರಾಜ್ ವಂದಿಸಿದರು.