ವಂಚನೆ ಆರೋಪ: ಪೊಲೀಸ್ ಪೇದೆ ಸೆರೆ

ಬೆಂಗಳೂರು, ಜ.2: ಪಿಎಸ್ಸೈ ಹುದ್ದೆಗೆ ಶಿಫಾರಸ್ಸು ಮಾಡುವುದಾಗಿ ನಂಬಿಸಿ, ವಂಚಿಸಿದ ಆರೋಪದಡಿ ಪೊಲೀಸ್ ಪೇದೆಯೋರ್ವನನ್ನು ಇಲ್ಲಿನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಗೋವಿಂದರಾಜು ಬಂಧಿತ ಪೊಲೀಸ್ ಪೇದೆಯಾಗಿದ್ದು, ಈತ ದಕ್ಷಿಣ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಪಿಎಸ್ಸೈ ಹುದ್ದೆಗೆ ಶಿಫಾರಸ್ಸು ಮಾಡುವುದಾಗಿ ಸುನೀಲ್ ಎಂಬಾತನಿಂದ 21ಲಕ್ಷ ರೂ.ಹಣ ಪಡೆದುಕೊಂಡು, ಬಳಿಕ ಹಣ ವಾಪಸ್ಸು ನೀಡದೆ, ವಂಚನೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಂಚನೆಗೊಳಗಾದ ಸುನೀಲ್ ನಗರದ ಯಶವಂತಪುರ ನಿವಾಸಿಯಾಗಿದ್ದು, 2015ನೇ ಸಾಲಿನಲ್ಲಿ ಪಿಎಸ್ಸೈ ಪರೀಕ್ಷೆ ಬರೆದಿದ್ದ. ನೇಮಕಾತಿ ಸಂದರ್ಭದಲ್ಲಿ ಸಂಬಂಧಿ ಶಿವಪ್ರಕಾಶ್ ಮೂಲಕ ಗೋವಿಂದರಾಜುಗೆ ಹಣ ನೀಡಿದ್ದ ಎಂದು ಹೇಳಲಾಗುತ್ತಿದೆ.
ಆರೋಪಿ ಗೋವಿಂದರಾಜು ವಿರುದ್ಧ ಅನೇಕರು ವಂಚನೆ ಆರೋಪ ಮಾಡಿದ್ದರು. ಈ ಸಂಬಂಧ ವಿಧಾನಸೌಧ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇನ್ನೂ, ಆರೋಪಿ ಅನ್ನು ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಸಹ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.







