ಉಡುಪಿ ಶ್ರೀಕೃಷ್ಣ ಮಠಕ್ಕೆ ಕರ್ನಾಟಕ ಬ್ಯಾಂಕ್ ಕೊಡುಗೆ

ಉಡುಪಿ, ಜ.2: ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕರ್ನಾಟಕ ಬ್ಯಾಂಕಿನ ವತಿಯಿಂದ ಕೊಡುಗೆಯಾಗಿ ನೀಡಲಾದ ಊಟೋಪಚಾರದ ಪಾತ್ರೆಗಳ ಶುದ್ಧಿಕರಣದ (ಡಿಶ್ ವಾಶರ್) ಯಂತ್ರವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥರು ಬುಧವಾರ ಇಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು, ಧರ್ಮದ ಜೊತೆಗೆ ಅರ್ಥ ಇರುವ ಬ್ಯಾಂಕ್ ತಮಗೆ ಬಂದ ಲಾಭಂಶದಲ್ಲಿ ಇಂತಹ ಸತ್ಕಾರ್ಯಗಳಿಗೆ ಸಹಕಾರ ಮಾಡುತ್ತಿದೆ. ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಪೂರಕವಾಗಿ ಕೃಷ್ಣ ಮಠದಲ್ಲಿ ನಡೆಯುವ ಭೋಜನ ಪ್ರಸಾದದ ಪಾತ್ರೆಗಳನ್ನು ಶುದ್ಧಿಗೊಳಿಸಲು ಈ ಯಂತ್ರವನ್ನು ನೀಡಿದ್ದಾರೆ. ಹಸಿದವನಿಗೆ ಊಟ ಹಾಕಿದ ಪುಣ್ಯದಷ್ಟೆ ಅದಕ್ಕೆ ಪೂರಕವಾದ ಕಾರ್ಯಗಳನ್ನು ಮಾಡಿದರೆ ಸಿಗುತ್ತದೆ. ಆದ್ದರಿಂದ ಕರ್ನಾಟಕ ಬ್ಯಾಂಕ್ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯ ಮಾಡುತ್ತಾ ಅಭಿವೃದ್ಧಿ ಹೊಂದಲಿ ಎಂದು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್, ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.,ಸಹಾಯಕ ಮಹಾಪ್ರಬಂಧಕ ಗೋಪಾಲಕೃಷ್ಣ ಸಾಮಗ, ಪಿಆರ್‌ಓ ಶ್ರೀನಿವಾಸ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.