ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಹುನ್ನಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೀದರ್, ಜ. 2: ಬಿಜೆಪಿ ಮುಖಂಡರು ತೋಳ ಬಂತು...ತೋಳ ಬಂತು ಎನ್ನುತ್ತಿದ್ದಾರೆ. ಪ್ರತಿನಿತ್ಯ ತೋಳ ಎಲ್ಲಿಂದ ಬರಬೇಕು. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ. ಹೀಗಾಗಿ ಮೈತ್ರಿ ಸರಕಾರ ಅಸ್ಥಿರಕ್ಕೆ ಹುನ್ನಾರ ನಡೆಸಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದೂರಿದ್ದಾರೆ.
ಬುಧವಾರ ಜಿಲ್ಲೆಯ ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವದ ವಿರೋಧಿ. ಅವರಿಗೆ ಯಾವುದೇ ಕಾಳಜಿಯೂ ಇಲ್ಲ. ರಾಜಕೀಯದಲ್ಲಿ ತಂತ್ರ ಪ್ರತಿತಂತ್ರ ಸಾಮಾನ್ಯ. ಆದರೆ, ಬಿಜೆಪಿಯವರದ್ದು ‘ಮಾಡಿದ್ದುಣ್ಣೋ ಮಾರಾಯ’ ಕಥೆಯಂತಾಗಿದೆ ಎಂದು ಟೀಕಿಸಿದರು.
ನಮ್ಮ ಪಕ್ಷದ ಶಾಸಕರಿಗೆ ಪ್ರತಿನಿತ್ಯ ಆಸೆ-ಅಮಿಷಗಳನ್ನು ಒಡ್ಡುತ್ತಿದ್ದು, ಇದರ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಈಶ್ವರ್ ಖಂಡ್ರೆ, ನಮ್ಮ ಶಾಸಕರ್ಯಾರು ಬಿಜೆಪಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.
ಮುಂದಿನ ಲೋಕಸಭೆ ಚುನಾವಣೆ ವೇಳೆ ಬೀದರ್ ಕ್ಷೇತ್ರವನ್ನು ಬಿಟ್ಟುಕೊಡಲು ಮಾಜಿ ಪ್ರಧಾನಿ ದೇವೇಗೌಡ ಯಾವುದೇ ಷರತ್ತು ಹಾಕಿಲ್ಲ. ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡಲು ಕೋರಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಈಶ್ವರ್ ಖಂಡೆ ಹೇಳಿದರು.







