ವೈಷ್ಣೋದೇವಿ ಮಂದಿರ: 2017-18ರಲ್ಲಿ ಭಕ್ತರಿಂದ 40 ಲಕ್ಷ ರೂ. ರದ್ದಾದ ನೋಟುಗಳ ಕಾಣಿಕೆ !
ಶ್ರೀನಗರ,ಜ.2: ಜಮ್ಮು ಮತ್ತು ಕಾಶ್ಮೀರದ ರೀಸಿ ಜಿಲ್ಲೆಯಲ್ಲಿರುವ ವೈಷ್ಣೋದೇವಿ ಮಾತೆ ಮಂದಿರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಕ್ತರು 40 ಲಕ್ಷ ರೂ. ರದ್ದಾದ ನೋಟು ಕಾಣಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016ರ ನವೆಂಬರ್ 9 ಮತ್ತು ಡಿಸೆಂಬರ್ 9ರ ಮಧ್ಯೆ ಯಾತ್ರಾರ್ಥಿಗಳು ವೈಷ್ಣೋದೇವಿಗೆ 1.90 ಕೋಟಿ ರೂ. ರದ್ದಾದ ನೋಟು ಅರ್ಪಿಸಿದ್ದರು. 2016ರ ಡಿಸೆಂಬರ್ 31ರಿಂದ ಅಮಾನ್ಯಗೊಂಡ ನೋಟುಗಳನ್ನು ಕಾಣಿಕೆ ಹಾಕುವುದು ಕಡಿಮೆಯಾಗಿದ್ದರೂ 2017-18ರಲ್ಲಿ 40 ಲಕ್ಷ ರದ್ದಾದ ನೋಟುಗಳು ದೊರೆತಿವೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಅಮಾನ್ಯಗೊಂಡಿರುವ ಈ ನೋಟುಗಳನ್ನು ಸ್ವೀಕರಿಸಲು ಆರ್‌ಬಿಐ ನಿರಾಕರಿಸುತ್ತದೆ. ಹಾಗಾಗಿ ಅವುಗಳು ನಮಗೂ ಉಪಯೋಗಕ್ಕೆ ಬರುವುದಿಲ್ಲ. ನಾವು ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತೇವೆ ಎಂದು ಮಂದಿರದ ಮುಖ್ಯ ಕಾರ್ಯಕಾರಿ ನಿರ್ದೇಶಕ ಸಿಮ್ರನ್‌ದೀಪ್ ಸಿಂಗ್ ತಿಳಿಸಿದ್ದಾರೆ. ವೈಷ್ಣೋದೇವಿ ದೇಶದ ಎರಡನೇ ಶ್ರೀಮಂತ ದೇವಸ್ಥಾನವಾಗಿದೆ. ಮೊದಲ ಸ್ಥಾನವನ್ನು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಪಡೆದುಕೊಂಡಿದೆ.