ಸಮ್ಮಿಶ್ರ ಸರಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ರಾಜ್ಯ ಪ್ರವಾಸ: ಬಿಜೆಪಿ ನಾಯಕ ಬಿ.ಜೆ.ಪುಟ್ಟಸ್ವಾಮಿ
"ಸಾಲ ಮನ್ನಾ ಸಾಧ್ಯವಾಗಲ್ಲ, ಅದು ಗಿಮಿಕ್"

ಬೆಂಗಳೂರು, ಜ.2: ರಾಜ್ಯ ಪ್ರವಾಸದ ಮೂಲಕ ಬಿಜೆಪಿ ಸರಕಾರದ ಸಾಧನೆ ಹಾಗೂ ಮೈತ್ರಿ ಸರಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಪಕ್ಷದ ಒಬಿಸಿ ಘಟಕ ಮತ ಯಾಚಿಸಲಿದೆ. ಹಾಗೂ ಹೆಚ್ಚಿನ ಸ್ಥಾನ ಗೆಲ್ಲಲು ಪಣ ತೊಡಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.16 ರಿಂದ ರಾಜ್ಯದ ಎಲ್ಲ 28 ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಘಟಕ ಎರಡು ತಂಡದಲ್ಲಿ ಪ್ರವಾಸ ಮಾಡಲಿದೆ. ಲೋಕಸಭೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು, ಮುಂದೆ ನಡೆಯುವ ಸಮ್ಮೇಳನಕ್ಕೆ ಅವರನ್ನು ತಯಾರಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು. ಫೆ. 17ರಂದು ಪಾಟ್ನಾದಲ್ಲಿ ನಡೆಯುವ ಒಬಿಸಿ ಸಮ್ಮೇಳನದಲ್ಲಿ ಮೋದಿ ಭಾಷಣ ಮಾಡಲಿದ್ದು, ಅಲ್ಲಿಗೆ ರಾಜ್ಯದಿಂದ ಹೆಚ್ಚಿನ ಜನರನ್ನು ಕರೆದೊಯ್ಯುವುದು. ಫೆ.27ರಂದು ಯಡಿಯೂರಪ್ಪ ಅವರ ಹುಟ್ಟು ಹಬ್ಬವಿದ್ದು, ಅಂದು ಹಿಂದುಳಿದ ವರ್ಗಗಳನ್ನು ಸೇರಿಸಿ ಸಮಾರಂಭ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದ ಗದ್ದುಗೆಯನ್ನು ಏರುವುದಕ್ಕಾಗಿ ಬಹಳ ಆಶ್ವಾಸನೆಗಳನ್ನು ನೀಡಿದ್ದಾರೆ. ಆದರೆ, ಆ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಸಾಲ ಮನ್ನಾ ಕೇವಲ ಒಂದು ಗಿಮಿಕ್ ಮಾತ್ರ. ಅವರ ಕೈಯಲ್ಲಿ ಸಾಧ್ಯವಾಗಲ್ಲ. 48 ಸಾವಿರ ಕೋಟಿ ಮನ್ನಾ ಮಾಡುವುದಾಗಿ ಹೇಳಿ ಇದೀಗ 50 ಸಾವಿರ ರೈತರ ಸಾಲಮನ್ನಾ ಎಂದು ದೇವೇಗೌಡ ಹೇಳಿದ್ದಾರೆ. ಆರು ತಿಂಗಳಲ್ಲಿ 50 ಸಾವಿರ ರೈತರಿಗೆ ಮಾಡಿದರೆ ಬಾಕಿ ಇರುವ ರೈತರ ಸಾಲ ಮನ್ನಾಗೆ ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು.
ಒಬಿಸಿ ವರ್ಗಕ್ಕೆ ಎಲ್ಲೆಲ್ಲಿ ಗೆಲ್ಲುವ ಶಕ್ತಿ ಇದೆ ಎಂದು ಪ್ರವಾಸದ ವೇಳೆ ಪಟ್ಟಿ ಮಾಡಿ ಮಾಹಿತಿ ನೀಡಿ ಎಂದಿದ್ದೇನೆ. ಅದರ ಮೇಲೆ ನಮಗೆ ಎಷ್ಟು ಸ್ಥಾನ ನೀಡಿ ಎಂದು ಕೇಳಬೇಕು ಎಂದು ತೀರ್ಮಾನ ಮಾಡುತ್ತೇವೆ. ಆದರೆ ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಸ್ಪರ್ಧೆ ಮಾಡಲ್ಲ ಎಂದು ಪುಟ್ಟಸ್ವಾಮಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರಕಾರ ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ಕಡಿಮೆ ಹಣ ಮೀಸಲಿರಿಸಿದೆ ಎಂದು ಹೇಳಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಮಾತನಾಡಿ, ರಾಜ್ಯ ಸರಕಾರ ಮತ್ತೆ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಯಾವುದೇ ಕಾರಣಕ್ಕೂ ಅದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬಿಜೆಪಿಯ ವಿರೋಧವಿದೆ. ಈ ಹಿಂದೆಯೇ ಪರಿಸರ ಪ್ರೇಮಿಗಳು, ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಹಿಂದಿನ ಕಮಿಟ್ಮೆಂಟ್ ಪೂರ್ತಿ ಮಾಡಲು ಈಗ ಹೊರಟಿದ್ದಾರೆ. ಆದರೆ ಇದಕ್ಕೆ ನಾವು ಅವಕಾಶ ನೀಡಲ್ಲ ಎಂದರು.
ನಗರದ ಶಿವಾನಂದ ವತ್ತದಲ್ಲಿ 9 ತಿಂಗಳಲ್ಲಿ ಮುಗಿಸಲಿದ್ದೇವೆ ಎಂದು ಉಕ್ಕಿನ ಸೇತುವೆ ನಿರ್ಮಾಣ ಆರಂಭಿಸಿ ಎರಡು ವರ್ಷ ಆದರೂ ಮುಗಿಸಿಲ್ಲ. ಸ್ಟೀಲ್ ಬ್ರಿಡ್ಜ್ ಮತ್ತು ವೈಟ್ ಟ್ಯಾಪಿಂಗ್ ಮೇಲೆ ಈ ಸರಕಾರಕ್ಕೆ ವ್ಯಾಮೋಹ ಬಂದಿದೆ ಎಂದು ಟೀಕಿಸಿದರು.







