ಕೇರಳ ಸರಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ: ಚಂದ್ರಶೇಖರ ಪಾಟೀಲ
ಶಬರಿಮಲೆಗೆ ಮಹಿಳೆಯರ ಪ್ರವೇಶ

ಧಾರವಾಡ, ಜ.2: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರಕಾರ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವ ಮೂಲಕ ನೂರಾರು ವರ್ಷ ಚಾಲ್ತಿಯಲ್ಲಿದ್ದ ಮೌಢ್ಯದ ನಿರ್ಮೂಲನೆಗೆ ಮುಂದಾಗಿರುವುದು ಅಭಿನಂದನೀಯವಾಗಿದೆ ಎಂದರು.
ಪ್ರೊ.ಭಗವಾನ್ ರಾಮನಿಗೆ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು. ರಾಮಮಂದಿರ ಏಕೆ ಬೇಡ? ಎಂಬುದು ಹಳೆಯ ಪುಸ್ತಕ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ರಾಮ ಮಂದಿರ ಬೇಕು ಎನ್ನುವವರು ಯಾಕೆ ಬೇಕು ಎಂಬುದರ ಕುರಿತು ಪುಸ್ತಕ ಬರೆದು ಪ್ರಕಟಿಸಲಿ. ಆಗ ಯಾವುದು ಸರಿಯೆಂದು ಜನತೆಯೆ ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದರು.
ನಾನು ಮೂಲತಃ ನಾಸ್ತಿಕ. ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಬರೆದ ರಾಮಾಯಣಕ್ಕೂ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ. ನನ್ನ ಪಾಲಿಗೆ ಅದೊಂದು ಮಹಾಕಾವ್ಯ ಎಂದು ಅವರು ಹೇಳಿದರು.
ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದು. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ. ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು 300 ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಎಂದು ಅವರು ಹೇಳಿದರು.







