ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಬೇಡ : ರಾಜ್ಯಸಭೆಯಲ್ಲಿ ಬಿ.ಕೆ.ಹರಿಪ್ರಸಾದ್

ಮಂಗಳೂರು, ಡಿ. 30 : ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಸಂಸದ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಪ್ರತ್ಯೇಕವಾಗಿ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುವಾಹಟಿ, ತಿರುವನಂತಪುರಂ, ಕರ್ನಾಟಕ ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳ ಖಾಸಗಿ ಸಹಭಾಗಿತ್ವದ ಪ್ರಸ್ತಾಪ ಸದನದ ಮುಂದೆ ಚರ್ಚೆಗೆ ಬಂದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಸದನದ ಗಮನಕ್ಕೆ ತಂದಿದ್ದೇವೆ. ಸರಕಾರ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಹೊಂದಿದ್ದರೆ ಆ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ರಾಜ್ಯ ಸಭೆಯಲ್ಲಿ ಆಗ್ರಹಿಸಿದ್ದೇವೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಕೆಎಪಿಎಲ್ ಖಾಸಗೀಕರಣಕ್ಕೆ ವಿರೋಧ: ಕೈ ಬಿಡುವ ಭರವಸೆ ದೊರೆತಿದೆ
ಇದೇ ಅಧಿವೇಶನದಲ್ಲಿ ಕರ್ನಾಟಕ ಬಯೋಟೆಕ್ ಆ್ಯಂಡ್ ಫಾರ್ಮಾಸುಟಿಕಲ್ಸ್ ಲಿಮಿಟೆಡ್ ಎಂಬ ಸರಕಾರಿ ಸ್ವಾಮ್ಯದ ಲಾಭದಾಯಕ ಸ್ಥಿತಿಯಲ್ಲಿರುವ ಘಟಕವನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಕಾಂಗ್ರೆಸ್ ಪಕ್ಷದ ಸದ್ಯರು ವಿರೋಧಿಸಿದ್ದೆವು. ಅದನ್ನು ಖಾಸಗೀಕರಣಗೊಳಿಸುವುದಿಲ್ಲ ಎನ್ನುವ ಉತ್ತರ ಇಂದಿನ ಅಧಿವೇಶನದಲ್ಲಿ ದೊರೆತಿದೆ. ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ಕೈ ಬಿಡಬೇಕು ಎನ್ನುವ ವಿಚಾರವನ್ನು ಸದನದಲ್ಲಿ ಮಂಡಿಸಿದ್ದೇವೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.