ಜ.6ರಂದು ಪರ್ಕಳದಲ್ಲಿ ಅಂತರಜಿಲ್ಲಾ ಚೆಸ್ ಟೂರ್ನಿ
ಉಡುಪಿ, ಜ.2: ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಸಹಯೋಗದಲ್ಲಿ ಜ.6ರ ರವಿವಾರದಂದು ಪರ್ಕಳದ ಪರ್ಕಳ ಪ್ರೌಢ ಶಾಲಾ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಅಂತರ್‌ಜಿಲ್ಲಾ ಚೆಸ್ ಟೂರ್ನಿಯನ್ನು ಆಯೋಜಿಸಿದೆ ಎಂದು ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು,ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಚೆಸ್ ಆಟಗಾರರು ಈ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಸ್ಪರ್ಧೆಯು 7, 9, 11, 13, 15 ಹಾಗೂ 17 ವರ್ಷದೊಳಗಿನವರಿಗೆ ಹಾಗೂ ಮುಕ್ತ ವಿಭಾಗ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಯೋಮಾನದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಬಹುಮಾನಗಳಿವೆ. ಪ್ರತಿ ವಿಭಾಗಗಳಲ್ಲಿ ತಲಾ ಹತ್ತು ಹಾಗೂ ಮುಕ್ತ ವಿಭಾಗದಲ್ಲಿ 12 ಬಹುಮಾನಗಳನ್ನು ನಗದು ರೂಪದಲ್ಲಿ ನೀಡ ಲಾಗುತ್ತದೆ. ಇದರೊಂದಿಗೆ ಅರಳುವ ಪ್ರತಿಭೆ ಹಾಗೂ ಹಿರಿಯ ಪ್ರತಿಭೆಗಳಿಗೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಬಾಲಕೃಷ್ಣ ಪರ್ಕಳ ತಿಳಿಸಿದರು.
ಸ್ಪರ್ಧೆಗಳನ್ನು ರಾಷ್ಟ್ರೀಯ ತೀರ್ಪುಗಾರರು ನಡೆಸಿಕೊಡಲಿದ್ದಾರೆ. ಭಾಗವಹಿಸ ಲಿಚ್ಛಿಸುವ ಸ್ಪರ್ಧಿಗಳು ವಾಟ್ಸಪ್ ನಂ.:9448501387ಗೆ ಸಂದೇಶ ಕಳುಹಿಸಿ ಹೆಸರು ನೊಂದಾಯಿಸಿಕೊಳ್ಳಬಹುದು. ಅಲ್ಲದೇ ಜ.6ರಂದು ಸ್ಥಳದಲ್ಲೇ ಹೆಸರು ನೊಂದಾಯಿಸಿಕೊಳ್ಳಲು ಸಹ ಅವಕಾಶಗಳಿವೆ ಎಂದವರು ನುಡಿದರು.
ಪಂದ್ಯಾವಳಿ ಫಿಡೇ ನಿಯಮಾವಳಿಯಂತೆ ಸ್ವೀಸ್‌ಲೀಗ್ ಮಾದರಿಯಲ್ಲಿ ನಡೆಯಲಿದೆ. ಟೂರ್ನಿಯನ್ನು ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ರಾಜಗೋಪಾಲ್ ಶೆಣೈ ಉದ್ಘಾಟಿಸುವರು.
ಪತ್ರಿಕಾಗೋಷ್ಠಿಯಲ್ಲಿ ನೇತಾಜಿ ಕ್ಲಬ್‌ನ ಮಂಜುನಾಥ ಮಣಿಪಾಲ, ಚೆಸ್ ಸಂಸ್ಥೆಯ ಉಪಾಧ್ಯಕ್ಷ ಉಮಾನಾಥ್ ಕಾಪು, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ನಾಗೇಂದ್ರ ಹಾಗೂ ನವೀನ್‌ರಾಜ್ ಉಪಸ್ಥಿತರಿದ್ದರು.