ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ 38.08 ಕೋಟಿ ರೂ.ಬಾಕಿ
ಅಮ್ಜದ್ ಖಾನ್ ಎಂ.

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.2: 2015-16, 2016-17, 2017-18ನೆ ಸಾಲಿನಲ್ಲಿ ನುರಿಸಿದ ಕಬ್ಬಿಗೆ ಐದು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಡಿ.19ಕ್ಕೆ ಅನ್ವಯಿಸುವಂತೆ 38.08 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿವೆ.
2015-16ನೆ ಸಾಲಿನಲ್ಲಿ ಬಳ್ಳಾರಿಯ ಐಎಸ್ಆರ್ ಶುಗರ್ಸ್-9.47 ಕೋಟಿ ರೂ., ಬೆಳಗಾವಿಯ ಶಿವಸಾಗರ ಶುಗರ್ಸ್ 11.37 ಕೋಟಿ ರೂ., 2017-18ನೆ ಸಾಲಿನಲ್ಲಿ ಬೆಳಗಾವಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ-5.24 ಕೋಟಿ ರೂ., ಬೀದರ್ ಜಿಲ್ಲೆಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ-5.85 ಕೋಟಿ ರೂ. ಹಾಗೂ ಭಾಲ್ಕೇಶ್ವರ ಶುಗರ್ಸ್-6.15 ಕೋಟಿ ರೂ.ಬಾಕಿ ಉಳಿಸಿಕೊಂಡಿವೆ.
ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕ್ರಮವಾಗಿ 2014-15ರಲ್ಲಿ 4.80 ಲಕ್ಷ ಹೆಕ್ಟೇರ್(ಕಬ್ಬು ಉತ್ಪಾದನೆ 480 ಲಕ್ಷ ಮೆಟ್ರಿಕ್ ಟನ್), 2015-16ರಲ್ಲಿ 4.50 ಲಕ್ಷ ಹೆಕ್ಟೇರ್(383 ಲಕ್ಷ ಮೆಟ್ರಿಕ್ ಟನ್), 2016-17ರಲ್ಲಿ 4.20 ಲಕ್ಷ ಹೆಕ್ಟೇರ್(286 ಲಕ್ಷ ಮೆಟ್ರಿಕ್ ಟನ್), 2017-18ರಲ್ಲಿ 4 ಲಕ್ಷ ಹೆಕ್ಟೇರ್(380 ಲಕ್ಷ ಮೆಟ್ರಿಕ್ ಟನ್) ಹಾಗೂ 2018-19ರಲ್ಲಿ 4.80 ಲಕ್ಷ ಹೆಕ್ಟೇರ್(450 ಲಕ್ಷ ಮೆಟ್ರಿಕ್ ಟನ್) ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
2015-16 ಹಾಗೂ 2016-17ರಲ್ಲಿ ರಾಜ್ಯದಲ್ಲಿ ಉಂಟಾದ ಬರಗಾಲದ ಕಾರಣ ನೀರಿನ ಕೊರತೆಯಿಂದಾಗಿ ಕಬ್ಬು ಬೆಳೆಯುವ ಪ್ರದೇಶ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, 2017-18ರಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಾಗಿದೆ. 2018-19ರಲ್ಲಿ ಕಬ್ಬು ಪ್ರದೇಶ ಮತ್ತು ಕಬ್ಬು ಉತ್ಪಾದನೆ ಎರಡರಲ್ಲೂ ಏರುಮುಖವಾಗಿದೆ.
2017-18ನೆ ಸಾಲಿನ ಹಂಗಾಮು ಪ್ರಾರಂಭದಲ್ಲಿ ಸಕ್ಕರೆ ಬೆಲೆ ಕೆ.ಜಿ.ಒಂದಕ್ಕೆ 36 ರೂ.ಇದ್ದದ್ದು, ಕಳೆದ ಸಾಲಿನ ಜನವರಿಯಲ್ಲಿ 25 ರೂ.ಗಳಿಗೆ ಇಳಿಯಿತು. ಅಲ್ಲದೆ, ಕೇಂದ್ರ ಸರಕಾರವು ಕಾರ್ಖಾನೆಗಳು ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದ ಸಕ್ಕರೆ ಪ್ರಮಾಣವನ್ನು ಘೋಷಿಸಿ ಹಾಗೂ ಮಾಹೆವಾರು ಬಿಡುಗಡೆಗೊಳಿಸಿದ ಸಕ್ಕರೆಯನ್ನಷ್ಟೇ ಮಾರಾಟ ಮಾಡಬೇಕೆಂಬ ಷರತ್ತುಗಳನ್ನು ವಿಧಿಸಿತ್ತು.
ಈ ಷರತ್ತುಗಳಿಂದ ಸಕ್ಕರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಾಗಲು ಸಾಧ್ಯವಾಯಿತು. ಇಂತಹ ಸಂದರ್ಭದಲ್ಲಿ ಕಾರ್ಖಾನೆಗಳು ಕಬ್ಬು ದರ ಪಾವತಿಸುವಲ್ಲಿ ವಿಳಂಬ ಮಾಡಿವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಕಳೆದ ಸಾಲಿನ ಜೂನ್ 2ರಂದು ಮೊದಲ ಸಭೆ ನಡೆಸಿದಾಗ ಒಟ್ಟು ಬಾಕಿ 2135.79 ಕೋಟಿ ರೂ.ಗಳಿದ್ದು, ಡಿ.19ರ ವೇಳೆಗೆ 17.24 ಕೋಟಿ ರೂ.ಗಳಿಗೆ ಇಳಿದಿದೆ. ಹಳೆಯ ಬಾಕಿ 22.89 ಕೋಟಿ ರೂ.ಗಳು ಇದೆ.
ವಾಣಿಜ್ಯ ತೆರಿಗೆ ಇಲಾಖೆಯವರು ನೀಡಿರುವ ಮಾಹಿತಿಯ ಪ್ರಕಾರ ಸಕ್ಕರೆ ಇಳುವರಿ ಪ್ರತಿಶತ 10.5 ಮತ್ತು ಅದಕ್ಕೂ ಮೇಲ್ಪಟ್ಟು ಇದ್ದಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 45 ರೂ.ಗಳನ್ನು, ಸಕ್ಕರೆ ಇಳುವರಿ 10.5ಕ್ಕಿಂತ ಕಡಿಮೆ ಇದ್ದಲ್ಲಿ 30 ರೂ.ಗಳ ದರದಲ್ಲಿ ಕಬ್ಬು ಖರೀದಿ ತೆರಿಗೆ ಪಾವತಿಸಬೇಕಿದೆ. ಹಾಗೆಯೇ, ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 5 ರೂ.ದರದಲ್ಲಿ ರಸ್ತೆ ಕರವನ್ನು ಪಾವತಿಸಲಾಗುತ್ತದೆ.
2017-18ನೆ ಹಂಗಾಮಿನಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬಂದಿದ್ದರಿಂದ ಈ ತೆರಿಗೆಗಳು ರದ್ದಾಗಿರುತ್ತವೆ. ಇದರ ಬದಲಿಗೆ ಸಕ್ಕರೆ ಮಾರಾಟದ ದರದ ಮೇಲೆ ಶೇ.2.5ರಷ್ಟು ರಾಜ್ಯ ಸರಕಾರಕ್ಕೆ ಮತ್ತು ಶೇ.2.5ರಷ್ಟು ಕೇಂದ್ರ ಸರಕಾರಕ್ಕೆ ಹಾಗೂ ಕಾಕಂಬಿ ಮಾರಾಟ ದರದ ಮೇಲೆ ಶೇ.14ರಷ್ಟು ರಾಜ್ಯ ಸರಕಾರಕ್ಕೆ ಮತ್ತು ಶೇ.14ರಷ್ಟು ಕೇಂದ್ರ ಸರಕಾರಕ್ಕೆ ಪಾವತಿಸಬೇಕಿದೆ.
ಕಬ್ಬು ಮತ್ತು ಕಬ್ಬಿನ ಉಪ ಉತ್ಪನ್ನಗಳಿಂದ ರಾಜ್ಯ ಸರಕಾರಕ್ಕೆ 2016-17ರಲ್ಲಿ 37.16 ಕೋಟಿ ರೂ. ಮತ್ತು 2017-18ರಲ್ಲಿ 64.20 ಕೋಟಿ ರೂ.ತೆರಿಗೆ ಆದಾಯ ಸಂದಾಯವಾಗಿದೆ.







