ಜ.6ರಂದು ನಡೆಯುವ ಚಿತ್ರಸಂತೆಗೆ ಗಾಂಧೀಜಿ ಮೆರಗು
ಬೆಂಗಳೂರು, ಜ.2: ಕರ್ನಾಟಕ ಚಿತ್ರಕಲಾ ಪರಿಷತ್ ಜ.6ರಂದು ಆಯೋಜಿಸಿರುವ ಚಿತ್ರಸಂತೆಯನ್ನು ಮಹಾತ್ಮ ಗಾಂಧೀಜಿಗೆ ಸಮರ್ಪಿಸುವ ಮೂಲಕ 150ನೆ ಗಾಂಧಿ ಜನ್ಮದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಬಾರಿಯ ಚಿತ್ರಸಂತೆಯನ್ನು ಗಾಂಧೀಜಿ-150ರ ಹಿನ್ನೆಲೆಯಲ್ಲಿ ರೂಪಿಸಲಾಗುತ್ತಿದೆ. ಚಿತ್ರಸಂತೆಯ ಪ್ರವೇಶ ದ್ವಾರವನ್ನು ಗಾಂಧೀಜಿಯ ಧರಿಸುತ್ತಿದ್ದ ಕನ್ನಡಕ ಮಾದರಿಯನ್ನು ಬೃಹತ್ ಕಲಾಕೃತಿಯಾಗಿ ಅಲಂಕರಿಸಲಾಗುತ್ತಿದೆ. ಕನ್ನಡಕದ ಕಣ್ಣುಗಳ ಮೂಲಕ ಕಲಾರಸಿಕರು ಚಿತ್ರಸಂತೆಗೆ ಹಾದು ಹೋಗುವ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಹಾಗೆಯೆ ಚಿತ್ರಸಂತೆಯ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಬೃಹತ್ ಚರಕವನ್ನು ಅಳವಡಿಸಲಾಗುತ್ತಿದೆ. ಹಾಗೂ ಈ ಚರಕದ ಮೂಲಕ ನೂಲನ್ನು ತೆಗೆದು, ಅಗತ್ಯವಿರುವ ಕಡೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಗಾಂಧೀಜಿಯ ಹುಟ್ಟಿನಿಂದ ನಿಧನದವರೆಗಿನ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಗಾಂಧೀ ಕುಟೀರ: ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಬಂದಾಗಲೆಲ್ಲ ಕುಮಾರ ಕೃಪಾದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ವಾಯು ವಿಹಾರಕ್ಕೆಂದು ಈಗಿನ ಚಿತ್ರಕಲಾ ಪರಿಷತ್‌ನ ಜಾಗದಲ್ಲಿ ಸುತ್ತಾಡಿ, ಅಲ್ಲಿನ ಬಂಡೆಯೊಂದರ ಮೇಲೆ ಧ್ಯಾನಸ್ಥರಾಗುತ್ತಿದ್ದರು. ಹೀಗಾಗಿ ಆ ಜಾಗವನ್ನು ಗಾಂಧೀ ಕುಟೀರವಾಗಿ ನಿರ್ಮಿಸಲಾಗುತ್ತಿದೆ.







