ಎಐಎಡಿಎಂಕೆ, ಟಿಡಿಪಿಯ 26 ಸದಸ್ಯರನ್ನು ಅಮಾನತುಗೊಳಿಸಿದ ಸ್ಪೀಕರ್

ಹೊಸದಿಲ್ಲಿ,ಜ.2: ಸದನದಲ್ಲಿ ವೇದಿಕೆಯ ಸಮೀಪ ಆಗಮಿಸಿ, ಕಾಗದಗಳನ್ನು ಹರಿದು ಕುರ್ಚಿಯತ್ತ ಎಸೆದು ಗದ್ದಲವೆಬ್ಬಿಸಿದ ಎಐಎಡಿಎಂಕೆ ಮತ್ತು ಟಿಡಿಪಿಯ 26 ಲೋಕಸಭಾ ಸದಸ್ಯರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಐದು ದಿನಗಳ ಕಾಲ ಅಮಾನತುಗೊಳಿಸಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನೂತನ ಅಣೆಕಟ್ಟು ನಿರ್ಮಾಣದ ವಿರುದ್ಧ ಎಐಎಡಿಎಂಕೆ ಪ್ರತಿಭಟನೆ ನಡೆಸಿದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯಿಟ್ಟು ಟಿಡಿಪಿ ಸದನದಲ್ಲಿ ಪ್ರತಿಭಟಿಸುತ್ತಿದೆ.
ಬುಧವಾರ ಸದನದಲ್ಲಿ ರಫೇಲ್ ಒಪ್ಪಂದದ ಬಗ್ಗೆ ಚರ್ಚೆ ನಡೆಸಲು ಮುಂದಾದಾಗ ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರು ಗದ್ದಲ ನಡೆಸಲು ಆರಂಭಿಸಿದ್ದಾರೆ. ಕ್ಷಣದಲ್ಲೇ ಕೆಲ ಸದಸ್ಯರು ತಮ್ಮ ಬಳಿಯಿದ್ದ ಕಾಗದಗಳನ್ನು ಹರಿದು ಚೇರ್‌ನತ್ತ ಎಸೆದಿದ್ದಾರೆ. ಈ ವೇಳೆ ಅವರ ಹೆಸರುಗಳನ್ನು ಕರೆಯುವುದಾಗಿ ಸ್ಪೀಕರ್ ಎಚ್ಚರಿಸಿದರೂ ಸದಸ್ಯರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಇದರಿಂದ ಬೇಸತ್ತ ಮಹಾಜನ್, ಒಬ್ಬೊಬ್ಬ ಸದಸ್ಯರ ಹೆಸರನ್ನು ಕರೆಯಲು ಆರಂಭಿಸಿದ್ದಾರೆ. ಇವರೆಲ್ಲ ಸದ್ಯ ಐದು ದಿನಗಳ ಕಾಲ ಅಮಾನತುಗೊಂಡಿದ್ದಾರೆ. ಘಟನೆಯ ನಂತರ ಎಐಎಡಿಎಂಕೆ ಸದಸ್ಯರು ಸಂಸತ್ ಸಂಕೀರ್ಣದ ಒಳಗೆಯೇ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.





