ವಿಜಯಾ ಬ್ಯಾಂಕ್ ವಿಲೀನಕ್ಕೆ ಸಂಸದರ ಮೌನ ಯಾಕೆ?: ಸಚಿವ ಖಾದರ್

ಮಂಗಳೂರು, ಜ.3: ಲಾಭದಲ್ಲಿರುವ ಮತ್ತು ದ.ಕ. ಮೂಲದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಸಂಸದ ನಳಿನ್ ಕುಮಾರ್ ಕಟೀಲು ಮೌನ ಯಾಕೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ವಿಜಯಾ ಬ್ಯಾಂಕ್ ಕೂಡಾ ಒಂದಾಗಿದ್ದು, ಸುಮಾರು 200 ಕೋ.ರೂ. ಲಾಭದಲ್ಲಿದೆ. ಬರೋಡಾ ಬ್ಯಾಂಕ್ 3 ಸಾವಿರ ಕೋ.ರೂ. ನಷ್ಟದಲ್ಲಿದೆ. ನಷ್ಟದಲ್ಲಿರುವ ಈ ಬ್ಯಾಂಕನ್ನು ವಿಜಯಾ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಬಹುದಿತ್ತು. ಆದರೆ ಪ್ರಧಾನಿ ತನ್ನ ತವರು ರಾಜ್ಯದ ಬ್ಯಾಂಕನ್ನು ಉಳಿಸುವ ಸಲುವಾಗಿ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ನಮ್ಮ ಸಂಸದರು ಮತ್ತು ಬಿಜೆಪಿಗರು ಧ್ವನಿ ಎತ್ತದಿರುವುದು ವಿಪರ್ಯಾಸ ಎಂದು ಖಾದರ್ ಹೇಳಿದರು.
ಸಾಲಮನ್ನಾ: ರಾಜ್ಯ ಸರಕಾರ ಈಗಾಗಲೆ ರೈತರ ಸಾಲಮನ್ನಾ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಆದರೆ ಬಿಜೆಪಿ ರಾಜಕೀಯ ಕಾರಣಕ್ಕಾಗಿ ಸಾಲಮನ್ನಾವನ್ನು ವಿರೋಧಿಸುತ್ತದೆ. ಪ್ರಧಾನಿ ಮೋದಿ ಸಹಿತ ಬಿಜೆಪಿಗರು ಟೀಕಿಸುವ ಬದಲು ರೈತರ ಸಾಲ ಮನ್ನಾ ಮಾಡಿ ತೋರಿಸಲಿ ಎಂದು ಸಚಿವ ಖಾದರ್ ಸವಾಲು ಹಾಕಿದರು.