ಜ.14ರಿಂದ 16ರವರೆಗೆ ನೆಲ್ಯಾಡಿಯಿಂದ ಬಿ.ಸಿ.ರೋಡ್‌ಗೆ ಕಾಂಗ್ರೆಸ್ ಪಾದಯಾತ್ರೆ: ರಮಾನಾಥ ರೈ
ಅಡ್ಡಹೊಳೆ-ಬಿ.ಸಿ.ರೋಡ್‌ವರೆಗೆ ರಾ.ಹೆದ್ದಾರಿ ಕಾಮಗಾರಿ ಪುನಾರಂಭಕ್ಕೆ ಆಗ್ರಹ

ಮಂಗಳೂರು, ಜ.3: ಬೆಂಗಳೂರು- ಮಂಗಳೂರು ನಡುವೆ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಜ.14ರಿಂದ 16ರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಾಡಿಯಿಂದ ಬಿ.ಸಿ.ರೋಡ್‌ವರೆಗೆ ಈ ಪಾದಯಾತ್ರೆ ನಡೆಯಲಿದ್ದು, ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
14ರಂದು ನೆಲ್ಯಾಡಿಯಿಂದ ಪಾದಯಾತ್ರೆ ಆರಂಭಗೊಂಡು ಉಪ್ಪಿನಂಗಡಿವರೆಗೆ, ಅಲ್ಲಿಂದ ಮರುದಿನ ಮಾಣಿವರೆಗೆ ಹಾಗೂ ಅಲ್ಲಿಂದ ಮಾರನೆ ದಿನ ಬಿ.ಸಿ.ರೋಡ್‌ವರೆಗೆ ‘ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ಉಳಿಸಿ’ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯಲಿದೆ. ಮೂರು ಕಡೆಗಳಲ್ಲೂ ಬಹಿರಂಗ ಸಭೆ ನಡೆಯಲಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಸಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜೀವರಕ್ಷಕವಿದ್ದಂತೆ. ಬೆಂಗಳೂರಿನಿಂದ ಮಂಗಳೂರಿನ ಬಂದರುವರೆಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಹಾಸನದಿಂದ ಬಿ.ಸಿ.ರೋಡ್‌ವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಂದಿನ ಯುಪಿಎ ಸರಕಾರದ ಅವಧಿಯಲ್ಲಿ ಅನುಮೋದನೆ ದೊರೆತು, ಹಾಸನದಿಂದ ಮಾರನಹಳ್ಳಿ- ಗುಂಡ್ಯವರೆಗೆ 63 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಅಂದು ಕೇಂದ್ರ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮಂಜೂರಾತಿ ಒದಗಿಸಿದ್ದರು. ಮೊದಲ ಹಂತದ ಕಾಮಗಾರಿಯ ಬಳಿಕ ಎರಡನೆ ಹಂತದ ಕಾಮಗಾರಿ ಕೈಗೆತ್ತಿಗೊಂಡಿದ್ದ ಗುತ್ತಿಗೆದಾರ ಎಲ್‌ಎನ್‌ಟಿ ಕಂಪೆನಿ ಕಾಮಗಾರಿ ಆರಂಭಿಸಿ ಬಳಿಕ ಸ್ಥಗಿತಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಣ ನೀಡದ ಕಾರಣ, ಕಂಪೆನಿ ದಿವಾಳಿಯಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಯಿಂದಾಗಿಯೇ ಕಂಪೆನಿ ದಿವಾಳಿಯಾಗಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಕಂಪನಿಗೆ ಪ್ರಾಧಿಕಾರದಿಂದ ಕೋಟ್ಯಂತರ ರೂ. ಬಾಕಿ ಇದ್ದು, ಹಣದ ಕೊರತೆಯಿಂದ ಕಂಪೆನಿ ಕಾಮಗಾರಿ ಸ್ಥಗಿತಗೊಳಿಸಿದೆ. ಆದರೆ ಇದೀಗ ಕಾಮಗಾರಿ ಅಪೂರ್ಣವಾಗಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ಪ್ರಾಣಹಾನಿಗೆ ಕಾರಣವಾಗಲಿದೆ. ಅದಕ್ಕಾಗಿ ಮಳೆಗಾಲಕ್ಕೆ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸುತ್ತಿರುವುದಾಗಿ ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.
ಶ್ರೀನಿವಾಸ ಮಲ್ಯರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಜಿಲ್ಲೆಯಲ್ಲಿ ಆಗಿವೆ. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಅಭಿವೃದ್ಧಿ ಕಾಮಗಾರಿಗಳು ಕುಂಠಿತ, ಅಪೂರ್ಣವಾಗಿವೆ. ವಿಮಾನ ನಿಲ್ದಾಣ, ಬಂದರು ಖಾಸಗೀಕರಣದ ಹೊಸ್ತಿಲಲ್ಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೋ, ಮೇಯರ್ ಭಾಸ್ಕರ ಕೆ., ಪಕ್ಷದ ನಾಯಕರಾದ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ನವೀನ್ ಡಿಸೋಜ, ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಶಾಹುಲ್ ಹಮೀದ್ ಉಪಸ್ಥಿತರಿದ್ದರು.
ಶಬರಿ ಮಲೆ ವಿಚಾರದಲ್ಲಿ ರಾಜಕೀಯ ಮಾಡಲಾರೆ
ಶಬರಿಮಲೆ ಕುರಿತಂತೆ ಕೇರಳದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಸುಪ್ರೀಂ ಕೋಟ್ ತೀರ್ಪು ಹಾಗೂ ಅಲ್ಲಿನ ವಿದ್ಯಮಾನಗಳ ಸಾಧಕ ಬಾಧಕಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು. ಯುವಕನಾಗಿದ್ದ ವೇಳೆ 18ಕ್ಕೂ ಅಧಿಕ ಬಾರಿ ವ್ರತಾಧಾರಣೆಯೊಂದಿಗೆ ಶಬರಿಮಲೆಗೆ ಭೇಟಿ ನೀಡಿದವ ನಾನು. ಸೌಹಾರ್ದ, ಸಾಮರಸ್ಯ, ಭಕ್ತಿ, ವಿಶ್ವಾಸ, ನಂಬಿಕೆಯ ದೃಷ್ಟಿಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಇದೀಗ ಅಲ್ಲಿನ ಸಾಧಕ ಬಾಧಕಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆ ವಿಷಯದಲ್ಲಿ ರಾಜಕೀಯ ಮಾಡಲಾರೆ ಎಂದರು.