ರೋವರ್ಸ್ -ರೇಂಜರ್ಸ್ ಮೂಟ್ ಕ್ಯಾಂಪ್ ಸಮರೋಪ

ಉಡುಪಿ, ಜ.3: ಜೀವನ ವೌಲ್ಯಗಳನ್ನು ಸರಿಯಾಗಿ ತಿಳಿದುಕೊಂಡು ವಿವೇಚನಾತ್ಮಕವಾಗಿ ಬಳಸಿಕೊಳ್ಳಬೇಕು ಮತ್ತು ಬದುಕಿನಲ್ಲಿ ನಂಬಿಕೆ ಇಟ್ಟು ಬೆಳಕು ಕಾಣುವ ಪ್ರಯತ್ನ ಮಾಡಬೇಕು ಎಂದು ಡಾ.ವಿಜಯೇಂದ್ರ ವಸಂತ್ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ರೋವರ್ಸ್ ಮತ್ತು ರೇಂಜರ್ಸ್ ಮೂಟ್ ಕ್ಯಾಂಪ್‌ನ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಪಠ್ಯೇತರ ಚಟುವಟಿಗಳು ಮುಖ್ಯ ಪಾತ್ರವಹಿಸುತ್ತವೆ. ದಾರ್ಶನಿಕ ವ್ಯಕ್ತಿಗಳ ಅನುಸರಣೆ ಮತ್ತು ಅನುಕರಣೆಯಿಂದ ಇದು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ.ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ ರಾವ್, ಜಿಲ್ಲಾ ಆಯುಕ್ತೆ(ಗೈಡ್ಸ್) ಜ್ಯೋತಿ ಜೆ.ಪೈ, ಜಿಲ್ಲಾ ಜೊತೆ ಕೋಶಾಧಿ ಕಾರಿ ಉಮೇಶ್ ಪೈ, ಜಿಲ್ಲಾ ಸ್ಕೌಟ್ ಲೀಡರ್ ಜಯರಾಮ್ ಶೆಟ್ಟಿಗಾರ್, ಜಿಲ್ಲಾ ಸಂಘಟಕ ನಿತಿನ್ ಅಮಿನ್, ಜಿಲ್ಲಾ ಸಂಘಟಕಿ ಸುಮನಾ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದ ನಾಯಕ ಡಾ.ಗುರುರಾಜ ಪ್ರಭು ಕೆ. ಸ್ವಾಗತಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಂಗಳೂರು ವಿವಿ ನೋಡಲ್ ಅಧಿಕಾರಿ, ಶಿಬಿರದ ನಾಯಕಿ ವಾರಿಜ ವಂದಿಸಿದರು. ರೇಂಜರ್ ಲೀಡರ್ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಶಿಬಿರದಲ್ಲಿ 110ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.







