ಕೈಗಾರಿಕೋದ್ಯಮಿಗಳಿಗೆ ಹಣ ನೀಡಲು ವಿಲೀನ: ಪರಿಷತ್ ಸದಸ್ಯ ಐವಾನ್ ಡಿಸೋಜಾ
ವಿಜಯ ಬ್ಯಾಂಕ್ ವಿಲೀನಕ್ಕೆ ಕಾಂಗ್ರೆಸ್ ಆಕ್ಷೇಪ

ಬೆಂಗಳೂರು, ಜ.3: ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಸಲ್ಲ. ವಿಲೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕರಿಂದಲೇ ಅಭಿವೃದ್ಧಿ ಹೊಂದಿರುವ ಬ್ಯಾಂಕ್ ಅನ್ನು ಕೈಗಾರಿಕೋದ್ಯಮಿಗಳಿಗೆ ಹಣ ನೀಡಲು ವಿಲೀನ ಮಾಡಲಾಗುತ್ತಿದೆ ಎಂದು ದೂರಿದರು.
ನಷ್ಟದಲ್ಲಿರುವ ಬ್ಯಾಂಕುಗಳ ಪುನಃಶ್ಚೇತನಕ್ಕೆ ಲಾಭದಲ್ಲಿರುವ ಬ್ಯಾಂಕುಗಳ ಜತೆ ವಿಲೀನ ಸಹಜ. ಆದರೆ, ಅತ್ಯಂತ ಹೆಚ್ಚು ಲಾಭದಲ್ಲಿರುವ ಮತ್ತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯ ಬ್ಯಾಂಕ್‌ನ್ನು ನಷ್ಟದ ಸುಳಿಯಲ್ಲಿರುವ ಬ್ಯಾಂಕಿನ ಜತೆಗೆ ವಿಲೀನ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಕೃಷಿಕರ ಅಭಿವೃದ್ಧಿಗಾಗಿ 1931ರಲ್ಲಿ 87ವರ್ಷಗಳ ಹಿಂದೆ ಸ್ಥಾಪಿತವಾಗಿರುವ ವಿಜಯ ಬ್ಯಾಂಕಿನ ಬಹುತೇಕ 2,700ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಬ್ಯಾಂಕ್ ಲಾಭದಾಯಕವಾಗಿದ್ದು, ಎನ್‌ಪಿಎ ಶೇ.4ರಷ್ಟು ಅತ್ಯಂತ ಕಡಿಮೆ ಇದೆ. ಇಂತಹ ಬ್ಯಾಂಕನ್ನು ಹೆಸರೇ ಗೊತ್ತಿಲ್ಲದ ಬ್ಯಾಂಕಿನೊಂದಿಗಿನ ವಿಲೀನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಐವಾನ್ ಡಿಸೋಜಾ ಹೇಳಿದರು.
ಬ್ಯಾಂಕುಗಳ ವಿಲೀನ ಅತ್ಯಂತ ಮಹತ್ವದ ವಿಚಾರ. ಜನರ ಬದುಕಿನ ಪ್ರಶ್ನೆಯೂ ಇದರಲ್ಲಿದೆ. ಇಂತಹ ತೀರ್ಮಾನವನ್ನು ಸಂಸತ್‌ನಲ್ಲಿ ಪ್ರಕಟಿಸದೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರದ ಈ ಕ್ರಮ ಖಂಡಿಸಿ ರಾಜ್ಯದ ಎಲ್ಲ ಸಂಸದರು ಹೋರಾಟ ನಡೆಸಬೇಕೆಂದು ಅವರು ಆಗ್ರಹಿಸಿದರು.
ನೀರವ್ ಮೋದಿಯಂತಹವರಿಗೆ ಸಾಲ ನೀಡಲಿಲ್ಲ ಎಂದು ವಿಜಯ ಬ್ಯಾಂಕ್‌ನ್ನು ಮತ್ತೊಂದು ಬ್ಯಾಂಕಿನ ಜತೆ ವಿಲೀನಕ್ಕೆ ಕೇಂದ್ರ ಮುಂದಾಗಿದೆ. ಇದರಲ್ಲಿ ರಾಜ್ಯದ ಅಸ್ತಿತ್ವದ ಪ್ರಶ್ನೆಯೂ ಇದ್ದು, ವಿಲೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆಯಲು ಸಿಎಂ ಕುಮಾರಸ್ವಾಮಿಗೆ ಇದೇ ವೇಳೆ ಮನವಿ ಮಾಡಲಾಗುವುದು ಎಂದು ಐವಾನ್ ಡಿಸೋಜಾ ತಿಳಿಸಿದರು.







