ಮುಜರಾಯಿ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ: ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್

ಬೆಂಗಳೂರು, ಜ.3: ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ‘ಎ’ ಶ್ರೇಣಿಯ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣವನ್ನು ಇತರ ದೇವಾಲಯಗಳು, ಛತ್ರಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕಾಗಿ ಬಳಸಿಕೊಳ್ಳುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ನೂತನ ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಆರ್ಥಿಕವಾಗಿ ಸದೃಢವಾಗಿರುವ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣದ ಒಂದಷ್ಟು ಭಾಗವನ್ನು ಇತರ ದೇವಾಲಯಗಳ ಅಭಿವೃದ್ಧಿಗೂ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದನ್ನು ಸ್ಮರಿಸಿಕೊಂಡರು.
ತಿರುಪತಿ, ವಾರಣಾಸಿ, ಮಂತ್ರಾಲಯ ಸೇರಿದಂತೆ ಇನ್ನಿತರೆಡೆ ಇರುವ ಕರ್ನಾಟಕದ ಛತ್ರಗಳು, ಅತಿಥಿಗೃಹಗಳು ಅನುದಾನದ ಕೊರತೆ, ಸೂಕ್ತ ನಿರ್ವಹಣೆಯಿಲ್ಲದೆ ಭಕ್ತಾದಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ರಾಜ್ಯದ ಆಸ್ತಿಯ ಪ್ರಯೋಜನ ನಮ್ಮ ಜನರಿಗೆ ಸಿಗಬೇಕು ಎಂದು ಅವರು ಹೇಳಿದರು.
ಅತಿಥಿ ದೇವೋಭವ ಎನ್ನುತ್ತೀರಾ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಕಲ್ಪಿಸುವ ಸೌಲಭ್ಯಗಳು ಇದೇನಾ. ನಮ್ಮ ಮನೆಗಳನ್ನು ಇದೇ ರೀತಿ ಅವ್ಯವಸ್ಥೆಯಿಂದ ಇಟ್ಟುಕೊಳ್ಳುತ್ತೇವೆಯೇ? ಭಕ್ತರು ಮೈಸೂರು ಅರಮನೆಯ ಸಿಂಹಾಸವನ್ನು ಬಯಸುವುದಿಲ್ಲ. ನಮ್ಮ ಅತಿಥಿಗೃಹದಲ್ಲಿ ಸ್ವಚ್ಛತೆ, ಒಳ್ಳೆಯ ಹಾಸಿಗೆ, ಬೆಡ್‌ಶೀಟ್‌ಗಳನ್ನು ಬಯಸುತ್ತಾರೆ ಅಷ್ಟೇ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸೂಚಿಸಿದರು.
ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ 34,558 ಅಧಿಸೂಚಿತ ಸಂಸ್ಥೆಗಳಿವೆ. ಅವುಗಳ ಅಭಿವೃದ್ಧಿ, ದುರಸ್ತಿ, ಜೀರ್ಣೋದ್ಧಾರ, ಪುನರ್ ನಿರ್ಮಾಣದ ಹೊಣೆಗಾರಿಕೆ ನಮ್ಮ ಮೇಲಿದೆ. ಶ್ರೀಮಂತ ದೇವಾಲಯಗಳಲ್ಲಿ ಸಂಗ್ರಹವಾಗುವ ಸ್ವಲ್ಪ ಪ್ರಮಾಣದ ಹಣವನ್ನು ಬೇರೆ ದೇವಾಲಯಗಳ ಅಭಿವೃದ್ಧಿಗೂ ಬಳಸಿಕೊಳ್ಳುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಪರಮೇಶ್ವರ್ ನಾಯ್ಕ್ ಸಲಹೆ ನೀಡಿದರು.
ನೂತನ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಧಾರ್ಮಿಕ ಪರಿಷತ್‌ಗೆ ಸದಸ್ಯರನ್ನು ನೇಮಕ ಮಾಡದಿರುವುದನ್ನು ಗಮನಿಸಿದ ಪರಮೇಶ್ವರ್ ನಾಯ್ಕ್, ಈ ಸಂಬಂಧ ಕೂಡಲೆ ಕಡತವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಧಾರ್ಮಿಕ ಪರಿಷತ್ ರಚನೆಯಾಗುವವರೆಗೆ ಕಾಲಹರಣ ಮಾಡದೆ, ಮುಜರಾಯಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ತಜ್ಞರ ಸಲಹೆಗಳನ್ನು ಪಡೆಯಿರಿ, ಆನಂತರ, ಧಾರ್ಮಿಕ ಪರಿಷತ್ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದರು.
ಸಭೆಯಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







