ಜ.5: ಮರ್ಕಝ್ ವತಿಯಿಂದ ರಾಷ್ಟ್ರ ಮಟ್ಟದ ಕಲಾ ಉತ್ಸವ
ಬೆಂಗಳೂರು, ಡಿ.3: ದಕ್ಷಿಣ ಭಾರತದ ಅತ್ಯಂತ ದೊಡ್ಡ ಧಾರ್ಮಿಕ ಹಾಗೂ ಲೌಖಿಕ ವಿದ್ಯಾಭ್ಯಾಸ ಸಂಸ್ಥೆ ಕೇರಳದ ಮರ್ಕಝ್ ವತಿಯಿಂದ ಜ.5ರ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ರಾಷ್ಟ್ರ ಮಟ್ಟದ ಕಲಾ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವಿದ್ಯಾರ್ಥಿ ಮುಹಮ್ಮದ್ ಮುಸ್ತಫ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹಲಸೂರಿನಲ್ಲಿ ಒಂಭತ್ತು ವರ್ಷದಿಂದ ಮರ್ಕಝ್‌ನ ಅಧೀನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮರ್ಕಿನ್ಸ್ ಈ ಕಾರ್ಯಕ್ರಮದ ಸಹಯೋಗವನ್ನು ಹೊಂದಿದ್ದು, ಸಮಾರಂಭದಲ್ಲಿ ಭಾಷಣ, ಪ್ರಬಂಧ, ಚರ್ಚಾ, ಸಂಗೀತ, ಕವನ, ಕವನ ವಾಚನ, ರಸಪ್ರಶ್ನೆ ಸ್ಪರ್ಧೆ ಸೇರಿದಂತೆ 100ಕ್ಕೂ ಅಧಿಕ ಸ್ಪರ್ಧೆಗಳನ್ನು ಕನ್ನಡ, ಉರ್ದು, ಅರೆಬೀಕ್ ಭಾಷೆಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಮರ್ಕಿನ್ಸ್, ಕೊಡಗಿನ ಮರ್ಕಝುಲ್ ಹಿದಾಯ, ಮೈಸೂರಿನ ಅಲ್ ನೂರ್ ಎಜುಕೇಷನಲ್ ಸೆಂಟರ್, ಕೇರಳದ ಮದೀನತುನ್ನೂರ್, ಪೂನೂರ್, ತಮಿಳುನಾಡಿನ ಸತಕ್ ಎಜು ರೆನ್ ಕೀಳಕ್ಕರೆ, ರಾಜಸ್ಥಾನದ ತ್ವೈಬಾ ಗಾರ್ಡನ್ ಆಲ್ವಾರ್, ಪಶ್ಚಿಮ ಬಂಗಾಳದ ತೈಬಾ ಗಾರ್ಡನ್, ಮಧ್ಯ ಪ್ರದೇಶದ ಇಂದೋರ್ ತ್ವೈಬಾ ಕಾಲೇಜು ಹಾಗೂ ಗುಜರಾತಿನ ಅಡ್ವಾನ್ಸ್ಡ್ ಇಸ್ಲಾಮಿಕ್ ಸಂಸ್ಥೆಗಳಿಂದ 2,100 ವಿದ್ಯಾರ್ಥಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್‌ರವರ ನೇತೃತ್ವದಲ್ಲಿ ವಿದ್ಯಾಭ್ಯಾಸವಲ್ಲದೆ, ಮನೆ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯಗಳು, ಸೇರಿದಂತೆ ಬಡ- ಕುಟುಂಬಗಳಿಗೆ ಉಪಕಾರಿಯಾಗುವ ಹಲವು ಜೀವ- ಕಾರುಣ್ಯ ಸೌಲಭ್ಯಗಳನ್ನು ಮರ್ಕಝ್ ಜಗತ್ತಿನಾದ್ಯಂತ ನಡೆಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.







