ಬೆಂಗಳೂರು: ವಿಜಯ ಕಾಲೇಜ್ ನಿಂದ ಮಹಾಮಿಲನ-50 ವಾರ್ಷಿಕ ಕೂಟ
ನೆನಪುಗಳ ಕಡಲಲ್ಲಿ ತೇಲಿದ ಹಳೆಯ ವಿದ್ಯಾರ್ಥಿಗಳು

ಬೆಂಗಳೂರು, ಜ. 3: ಅಲ್ಲಿ ಹಳೆಯ ಸ್ನೇಹಿತರ ಸಮಾಗಮವಾಗಿತ್ತು. ಗುರು-ಶಿಷ್ಯರ ಸಮ್ಮಿಲನವಿತ್ತು. ಅವರೆಲ್ಲರೂ ಸೇರಿ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಬಹಳ ವರ್ಷಗಳ ಬಳಿಕ ಸೇರಿದವರು ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು, ಕಲಿಕೆಯ ದಿನಗಳ ನೆನಪಿನ ಕಡಲಲ್ಲಿ ತೇಲಿದರು.
ಗುರುವಾರ ಇಲ್ಲಿನ ವಿಜಯ ವಾಣಿಜ್ಯ ಕಾಲೇಜಿನ ಅಲುಮ್ನಿ (ಹಳೆ ವಿದ್ಯಾರ್ಥಿಗಳ ಸಂಘಟನೆ) ನಗರದ ವಿಜಯ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಮಹಾಮಿಲನ-50 ವಾರ್ಷಿಕ ಕೂಟದಲ್ಲಿ ಕಂಡುಬಂದ ಚಿತ್ರಣವಿದು.
ವಿಜಯ ವಾಣಿಜ್ಯ ಕಾಲೇಜಿನಲ್ಲಿ ಕಲಿತು ದೇಶ-ವಿದೇಶದ ಕಂಪೆನಿಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಗಣ್ಯರು, ನ್ಯಾಯಾಧೀಶರು, ಕ್ರೀಡಾಪಟುಗಳು, ಉದ್ಯಮಿಗಳನ್ನು ಸನ್ಮಾನಿಸಲಾಯಿತು. ವಿಜಯ ವಾಣಿಜ್ಯ ಕಾಲೇಜು ಬೆಳೆದ ಪರಿ ಮತ್ತು ಮುಂದೆ ಸಾಗಬೇಕಾದ ದಾರಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ನ್ಯಾಯಮೂರ್ತಿ ಎನ್.ಕುಮಾರ್, ವಿಜಯ ವಾಣಿಜ್ಯ ಕಾಲೇಜಿನಲ್ಲಿ ತಾವು ಕಲಿತ ದಿನಗಳ ಅನುಭವವನ್ನು ಬಿಚ್ಚಿಟ್ಟರು. ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಶಾಸಕ ಎನ್.ಎ.ಹಾರಿಸ್ ಮಹಾಮಿಲನದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದರು.
ವಿಜಯ ವಾಣಿಜ್ಯ ಅಲುಮ್ನಿ ಸಂಘದ ಅಧ್ಯಕ್ಷ ಮಾತನಾಡಿ, ಕಲಿತ ಕಾಲೇಜಿಗೆ ಕುಡಿಯುವ ನೀರು, ಕೊಠಡಿಗಳ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ನಮ್ಮ ಅಲುಮ್ನಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿಗೆ ಇನ್ನು ಹೆಚ್ಚಿನ ಸಹಕಾರ ನೆರವು ನೀಡಲು ನಾವು ಬದ್ಧರಿದ್ದೇವೆ ಎಂದು ಭರವಸೆ ನೀಡಿದರು.





