ನಾವು ಯಾಕೆ ಸೀಸ ಹಾಕಿರುವ ನೂಡಲ್ಸ್ ತಿನ್ನಬೇಕು?
ನೆಸ್ಲೆ(ಮ್ಯಾಗಿ)ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ,ಜ.3: ತನ್ನ ಜನಪ್ರಿಯ ಬ್ರಾಂಡ್ ಆಗಿರುವ ಮ್ಯಾಗಿ ನೂಡಲ್ಸ್‌ನಲ್ಲಿ ಸೀಸವಿರುವುದನ್ನು ಪ್ರಮುಖ ಎಫ್‌ಎಂಸಿಜಿ ಕಂಪನಿ ನೆಸ್ಲೆ ಇಂಡಿಯಾ ಲಿ. ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರೊಂದಿಗೆ ಕಂಪನಿಗೆ ಭಾರೀ ಹಿನ್ನಡೆಯಾಗಿದೆ.
ವಿಚಾರಣೆ ಸಂದರ್ಭ ನೆಸ್ಲೆ ಇಂಡಿಯಾದ ಪರ ವಕೀಲರು ನ್ಯಾಯಾಲಯಕ್ಕೆ ಈ ಮಾಹಿತಿಯನ್ನು ನೀಡಿದರು.
ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯು ಮ್ಯಾಗಿ ನೂಡಲ್ಸ್‌ನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದ ಬಳಿಕ ಸರಕಾರ ವಿರುದ್ಧ ನೆಸ್ಲೆ ಚರ್ಚೆ ಮತ್ತೆ ಕಾವು ಪಡೆದುಕೊಂಡಿರುವುದರ ಸ್ಪಷ್ಟ ಸಂಕೇತವಾಗಿದೆ. ಮ್ಯಾಗಿಯಲ್ಲಿ ಸೀಸವಿರುವುದಕ್ಕಾಗಿ ರಾಷ್ಟ್ರೀಯ ಬಳಕೆದಾರರ ದೂರುಗಳ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)ವು ಹೂಡಿದ್ದ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯವು ಪುನಃಶ್ಚೇತನಗೊಳಿಸಿದೆ.
2017ರ ಪೂರ್ವಾರ್ಧದಲ್ಲಿ ಆರೋಗ್ಯ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ನೆಸ್ಲೆ ಇಂಡಿಯಾ ವಿಫಲಗೊಂಡಿದ್ದಕ್ಕಾಗಿ ಬೃಹತ್ ಪ್ರಮಾಣದ ಮ್ಯಾಗಿ ಉತ್ಪನ್ನಗಳನ್ನು ನಾಶಗೊಳಿಸಲಾಗಿತ್ತು. ನೆಸ್ಲೆಯಿಂದ 640 ಕೋ.ರೂ.ಗಳ ನಷ್ಟ ಪರಿಹಾರವನ್ನು ಕೋರಿ ಸರಕಾರವು ಮೊಕದ್ದಮೆಯನ್ನು ದಾಖಲಿಸಿದೆ.
ಗುರುವಾರದ ವಿಚಾರಣೆ ವೇಳೆ,ಅತ್ಯಂತ ವಿಷಕಾರಿಯಾದ ಸೀಸವು ಅನುಮತಿಸಲ್ಪಟ್ಟ ಮಿತಿಯೊಳಗೇ ಇದೆ ಎಂದು ನೆಸ್ಲೆ ಪರ ವಕೀಲರು ವಾದಿಸಿದಾಗ,ಸೀಸದ ಅಂಶವಿರುವ ಮ್ಯಾಗಿಯನ್ನು ನಾವು ಏಕೆ ತಿನ್ನಬೇಕು ಎಂದು ಪೀಠವು ಅವರನ್ನು ಪ್ರಶ್ನಿಸಿತು.
ವಿಚಾರಣೆಯು ದೇಶಾದ್ಯಂತ ಮಿಲಿಯಗಟ್ಟಲೆ ಮಕ್ಕಳು ಮತ್ತು ವಯಸ್ಕರು ಸೇವಿಸುತ್ತಿರುವ ಆಹಾರ ಉತ್ಪನ್ನಗಳ ಸುರಕ್ಷತೆಯ ಕುರಿತು ದೀರ್ಘಕಾಲಿಕ ಚರ್ಚೆಗೆ ಮತ್ತೊಮ್ಮೆ ಚಾಲನೆ ನೀಡಿದೆ.







