ಶುಕ್ರವಾರದಿಂದ ಧಾರವಾಡದಲ್ಲಿ 84 ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ನೇತೃತ್ವ

ಧಾರವಾಡ, ಜ.3: ಧಾರವಾಡದಲ್ಲಿ ನಡೆಯಲಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಷರ ಜಾತ್ರೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಜ್ಯೋತ್ಸವ ಬಿಟ್ಟರೆ, ಕನ್ನಡಿಗರಿಗೆ ಸಾಹಿತ್ಯ ಸಮ್ಮೇಳನವೇ ದೊಡ್ಡದು. ಸಮ್ಮೇಳನ ನಡೆಯುವ ಧಾರವಾಡ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಕನ್ನಡದ ಕಂಪು ಹರಡಲು ಸಿದ್ಧವಾಗಿದೆ.
ನಗರದ ಎಲ್ಲ ಕಡೆಗಳಲ್ಲಿ ಕನ್ನಡ ಬಾವುಟ ಪ್ರತಿನಿಧಿಸುವ ಕೆಂಪು-ಹಳದಿ ಬಣ್ಣದ ಚಿತ್ತಾರಗಳು ರಾರಾಜಿಸುತ್ತಿವೆ. ಕನ್ನಡವೇ ಸತ್ಯ. ಕನ್ನಡವೇ ನಿತ್ಯ ಎಂಬ ನಾಮಫಲಕ, ಅಕ್ಷರ ಜಾತ್ರೆ ಕುರಿತ ಬಂಟಿಂಗ್ಸ್, ಹೋರ್ಡಿಂಗ್ಸ್ ಅಳವಡಿಸಲಾಗಿದೆ. ಸರಕಾರಿ ಕಟ್ಟಡ, ಕಾಂಪೌಂಡ್ ಗೋಡೆಗಳ ಮೇಲೆ ನಾಡು, ನುಡಿ, ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಸ್ಥಳಗಳ ಚಿತ್ತಾರ ಬರೆದು ಕನ್ನಡ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸಲಾಗುತ್ತಿದೆ.
ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನವು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ರಾಷ್ಟ್ರ ಧ್ವಜಾರೋಹಣ, ಕಸಾಪ ಅಧ್ಯಕ್ಷ ಮನುಬಳಿಗಾರ್ ಪರಿಷತ್ತಿನ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಅನಂತರ 8.30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ಆರಂಭಗೊಂಡು ಜ್ಯುಬಿಲಿ ವೃತ್ತ, ವಿವೇಕಾನಂದ ವೃತ್ತ, ಅಂಜುಮನ್ ಮಹಾವಿದ್ಯಾಲಯ, ರಾಣಿ ಚೆನ್ನಮ್ಮ ಉದ್ಯಾನವನ, ಹೊಸ ಬಸ್ ನಿಲ್ದಾಣದ ರಸ್ತೆಯ ಮೂಲಕ ಕೃಷಿ ವಿಶ್ವವಿದ್ಯಾಲಯ ಆವರಣದ ಪ್ರಧಾನ ವೇದಿಕೆಗೆ ತಲುಪುತ್ತದೆ. ಈ ಸಂದರ್ಭದಲ್ಲಿ ಸಮ್ಮೇಳನದ ಮೆರವಣಿಗೆಯಲ್ಲಿ ನಮ್ಮ ಆಶೋತ್ತರ, ಸ್ಫೂರ್ತಿಯ ಮೂಲವಾದ ಸಂವಿಧಾನವೂ ಸೇರಿದಂತೆ 1001 ಕನ್ನಡ ಪುಸ್ತಕಗಳನ್ನು ಸ್ತ್ರೀ-ಪುರುಷರೆಲ್ಲರೂ ತಲೆ ಮೇಲೆ ಹೊತ್ತು ಸಾಗಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 618 ಅತಿಥಿ ಗಣ್ಯರು, 992 ವಿಶೇಷ ಆಹ್ವಾನಿತರು, 338 ಕಾರ್ಯಕಾರಿ ಸಮಿತಿ ಸದಸ್ಯರು, 15,175 ನೋಂದಾಯಿತ ಪ್ರತಿನಿಧಿಗಳು, 42 ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಪದಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 17,365 ಸಂಖ್ಯೆಯಲ್ಲಿ ಅತಿಥಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.
ವಾಸ್ತವ್ಯ ವ್ಯವಸ್ಥೆ: ಅತಿ ಗಣ್ಯರಿಗೆ 35 ಹೊಟೇಲ್ ಹಾಗೂ ಹುಬ್ಬಳ್ಳಿಯ 45 ಹೊಟೇಲ್ ಸೇರಿದಂತೆ ಒಟ್ಟು 80 ಹೊಟೇಲ್‌ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ ಅವಳಿ ನಗರದಲ್ಲಿರುವ 87 ಹಾಸ್ಟೆಲ್, 35 ಕಲ್ಯಾಣ ಮಂಟಪ, 18 ಶಾಲೆಗಳು ಹಾಗೂ 14 ಪೇಯಿಂಗ್ ಗೆಸ್ಟ್ ಹೌಸ್ ಸೇರಿ ಒಟ್ಟು 154 ವಿವಿಧ ಸ್ಥಳಗಳಲ್ಲಿ 13,175 ಪ್ರತಿನಿಧಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನ್ಕಕೆ ಬರಲು ಉತ್ತರ-ದಕ್ಷಿಣ ಎಂಬ ಭೇದ ಇಲ್ಲದೇ ಒಟ್ಟು 10,390 ಪುರುಷರು, 3,889 ಮಹಿಳಾ ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದಾರೆ. ರಾಜ್ಯದ ನಾಲ್ಕೂ ವಿಭಾಗಗಳ ಪೈಕಿ ಬೆಳಗಾವಿ ನಂತರದಲ್ಲಿ ಬೆಂಗಳೂರು ವಿಭಾಗದಿಂದ ಹೆಚ್ಚಿನ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದು ಮಹಿಳೆಯರ ಸಂಖ್ಯೆಯೂ ಇಲ್ಲಿ ಹೆಚ್ಚಿದೆ.
ಊಟದ ವ್ಯವಸ್ಥೆ: ಊಟದ ಕೌಂಟರ್‌ಗಳಿಗೆ ಶ್ರೀ ಮುರಘಾಮಠ, ಸಿದ್ಧಾರೂಢಮಠ, ತಪೋವನ ಎಂದು ಹೆಸರಿಡಲಾಗಿದ್ದು, ಒಟ್ಟು 120ಕೌಂಟರ್‌ಗಳಿವೆ. ‘ಎ’ ಬ್ಲಾಕ್‌ನ 34 ಕೌಂಟರ್‌ಗಳಲ್ಲಿ 23 ಕೌಂಟರ್‌ಗಳು ಆಹಾರ ಪದಾರ್ಥ ವಿತರಿಸುವ, 11ಕೌಂಟರ್‌ನಲ್ಲಿ ಅನ್ನ-ಸಾಂಬಾರ್, ‘ಬಿ’ ಬ್ಲಾಕ್‌ನ 73 ಕೌಂಟರ್‌ಗಳಲ್ಲಿ 12 ಮಹಿಳೆಯರಿಗೆ, 8 ವಯೋವೃದ್ಧರು, ವಿಶೇಷಚೇತನರು, 26 ನೋಂದಾಯಿತ ಪ್ರತಿನಿಧಿಗಳಿಗೆ, 16 ಸಾಮಾನ್ಯರಿಗೆ, 11 ಅನ್ನ, ಸಾಂಬಾರಿಗೆ ಮೀಸಲಿಡಲಾಗಿದೆ.
ಸಮ್ಮೇಳನದ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಲು ಕೃಷಿ ವಿವಿಯಲ್ಲಿ 600 ಶಾಶ್ವತ ನೀರಿನ ನಳ ಅಳವಡಿಸಲಾಗಿದೆ. ಅವುಗಳಿಗೆ ಸಿಂಟೆಕ್ಸ್ ಟ್ಯಾಂಕ್ ಅಳವಡಿಸಿ ಮಲಪ್ರಭಾ ನದಿಯಿಂದ ನೀರು ಹರಿಸುವ ಕೆಲಸ ಮಾಡಲಾಗಿದೆ. 300 ಜನ ಸ್ವಚ್ಛತೆ ಕಾರ್ಮಿಕರು, 100 ತ್ಯಾಜ್ಯ ಡಬ್ಬ, 10-12 ವಾಹನ ಬಳಕೆ ಮಾಡಲಾಗಿದೆ.







