ಪ್ರತಿಭಟನೆಯ ವರದಿ ಮಾಡುತ್ತಿದ್ದ ಪತ್ರಕರ್ತೆಯ ಬೆನ್ನಿಗೆ ಒದ್ದ ಸಂಘಪರಿವಾರ ಕಾರ್ಯಕರ್ತರು
ದಾಳಿಗೊಳಗಾಗಿ ಕಣ್ಣೀರಿಡುತ್ತಲೇ ಕರ್ತವ್ಯನಿರ್ವಹಿಸಿದ ಶಾಜಿಲಾ ಫಾತಿಮಾ

#ದಿಟ್ಟ ಪತ್ರಕರ್ತೆಯ ಫೋಟೊಗಳು ವೈರಲ್
ಕೊಚ್ಚಿ, ಜ.3: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಸಂಘಪರಿವಾರ ಮತ್ತು ಬಿಜೆಪಿ ಕೇರಳದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ವರದಿ ಮಾಡುತ್ತಿದ್ದ ಪತ್ರಕರ್ತೆಯೊಬ್ಬರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ಪತ್ರಕರ್ತರ ಮೇಲೆ ದಾಳಿ ನಡೆಸುತ್ತಿರುವ ಮತ್ತು ಫ್ಲೆಕ್ಸ್ ಬೋರ್ಡ್ ಗಳನ್ನು ಕಿತ್ತೆಸೆಯುತ್ತಿರುವುದನ್ನು ಕೈರಾಲಿ ಟಿವಿಯ ಶಾಜಿಲಾ ಅಲಿ ಫಾತಿಮಾ ವರದಿ ಮಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳ ದಾಳಿಗೊಳಗಾದ ಹೊರತಾಗಿಯೂ ಕಣ್ಣೀರಿಡುತ್ತಲೇ ಶಾಜಿಲಾ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ನನಗೆ ಯಾರು ತುಳಿದರು ಎನ್ನುವುದು ಗೊತ್ತಿಲ್ಲ. ನಾನು ನೋವಿನಿಂದ ಚಡಪಡಿಸುತ್ತಿದ್ದಾಗ ದಾಳಿಕೋರರು ನನ್ನ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದರು. ಆದರೆ ನಾನು ನನ್ನೆಲ್ಲಾ ಶಕ್ತಿ ಬಳಸಿ ಕ್ಯಾಮರಾ ಹಿಡಿದುಕೊಂಡೆ. “ನಾನು ಬಿಜೆಪಿಯನ್ನು ಹೆದರಿಲ್ಲ. ಬಿಜೆಪಿಯ ದುಷ್ಕೃತ್ಯಗಳನ್ನು ನಾನು ಇನ್ನೂ ವರದಿ ಮಾಡುತ್ತೇನೆ” ಎಂದು ಶಾಜಿಲಾ ಹೇಳಿರುವುದಾಗಿ scroll.in ವರದಿ ಮಾಡಿದೆ.
ದಾಳಿಗೊಳಗಾದ ನಂತರ ಕಣ್ಣೀರಿಡುತ್ತಲೇ ಕರ್ತವ್ಯ ನಿರ್ವಹಿಸಿದ ಶಾಜಿಲಾರ ಫೋಟೊವನ್ನು ಮಾತೃಭೂಮಿ ಪ್ರಕಟಿಸಿತ್ತು. ಆನಂತರ ಅವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಬಿಂದು ಮತ್ತು ಕನಕದುರ್ಗ ಶಬರಿಮಲೆ ಪ್ರವೇಶಿಸಿದ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಕೇಳಲು ಶಾಜಿಲಾರನ್ನು ಕಳುಹಿಸಲಾಗಿತ್ತು. ತಿರುವನಂತಪುರಂನ ಸೆಕ್ರೇಟರಿಯೇಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಂದ ಪ್ರತಿಕ್ರಿಯೆ ಪಡೆದು ಶಾಜಿಲಾ ಹಿಂದಿರುಗಬೇಕಿತ್ತು. “ಆ ಸಂದರ್ಭ ಸೆಕ್ರೇಟರಿಯೇಟ್ ಕಡೆಗೆ ಗುಂಪೊಂದು ಆಕ್ರೋಶಭರಿತವಾಗಿ ಆಗಮಿಸುತ್ತಿತ್ತು. ಸರಕಾರದ ಹೋರ್ಡಿಂಗ್ ಗಳನ್ನು ಕಿತ್ತೆಸೆದ ಅವರು ಪತ್ರಕರ್ತರ ಮೇಲೆ ದಾಳಿ ನಡೆಸಲು ಆರಂಭಿಸಿದರು. ನಾನು ಇದನ್ನು ಚಿತ್ರೀಕರಿಸುತ್ತಿದ್ದ ಸಂದರ್ಭ ಗುಂಪಿನಲ್ಲಿದ್ದವರು ನನ್ನನ್ನು ಕೊಲ್ಲುವುದಾಗಿ ಬೆದರಿಸಿದರು. ಆದರೆ ನಾನು ಅವರ ಬೆದರಿಕೆಗಳನ್ನು ನಿರ್ಲಕ್ಷಿಸಿದೆರ. ಆದರೆ ನನ್ನ ಬೆನ್ನಿಗೆ ಯಾರೋ ತುಳಿದಾಗ ನನಗೆ ಆಘಾತವಾಗಿತ್ತು. ನನ್ನ ವೃತ್ತಿಜೀವನದಲ್ಲಿ ಇದು ಕೆಟ್ಟ ಅನುಭವ” ಎಂದವರು ಹೇಳಿರುವುದಾಗಿ ಸ್ಕ್ರೋಲ್ ಡಾಟ್ ಇನ್ ವರದಿ ತಿಳಿಸಿದೆ.







