ಸಂಸದ ನಳಿನ್ ಕುಮಾರ್ ಕಟೀಲ್ ಮೋದಿ ಭಕ್ತಿಯಿಂದ ಹೊರ ಬರಬೇಕು: ಅಮೀನ್ ಮಟ್ಟು
ವಿಜಯಾ ಬ್ಯಾಂಕ್ ವಿಲೀನ ಖಂಡಿಸಿ ಸಮಾನ ಮನಸ್ಕರ ಪ್ರತಿಭಟನೆ

ಮಂಗಳೂರು, ಜ.3: ದ.ಕ.ಜಿಲ್ಲೆಯಲ್ಲಿ ಸ್ಥಾಪನೆಗೊಂಡ ವಿಜಯಾ ಬ್ಯಾಂಕನ್ನು ‘ಬ್ಯಾಂಕ್ ಆಫ್ ಬರೋಡಾ’ದ ಜೊತೆ ಕೇಂದ್ರ ಸರಕಾರ ವಿಲೀನಗೊಳಿಸಿರುವುದನ್ನು ಖಂಡಿಸಿ ‘ಸಮಾನ ಮನಸ್ಕರು’ ಸೇರಿ ಗುರುವಾರ ದ.ಕ. ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ದ.ಕ.ಜಿಲ್ಲೆಯಲ್ಲಿ 5 ಬ್ಯಾಂಕ್‌ಗಳು ಜನ್ಮತಾಳಿವೆ. ಇವ್ಯಾವುದೂ ಕೂಡಾ ನಷ್ಟದಲ್ಲಿಲ್ಲ. ದಿವಾಳಿಯೂ ಆಗಿಲ್ಲ. ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಈ ನೆಲದ ಮಣ್ಣಿನ ಗುಣವನ್ನು ಎತ್ತಿ ತೋರಿಸಿವೆ. ಮುಲ್ಕಿ ಸುಂದರ ರಾಮ ಶೆಟ್ಟಿ, ಎ.ಬಿ.ಶೆಟ್ಟಿ, ಕೆ.ಕೆ.ಶೆಟ್ಟಿಯಂತಹ ಹಿರಿಯ ಚೇತನರ ನೇತೃತ್ವದಲ್ಲಿ ರೈತರು ಕಟ್ಟಿ ಬೆಳೆಸಿದ ಈ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ್ದರೂ ಕೂಡಾ ಜಿಲ್ಲೆಯ ಜನರ ಧ್ವನಿಯಾಗಬೇಕಿದ್ದ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತದಿರುವ ಮೂಲಕ ಹಿರಿಯ ಚೇತನರಿಗೆ ಅವಮಾನ ಮಾಡಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮೋದಿ ಭಕ್ತಿಯಿಂದ ಹೊರ ಬರಬೇಕು ಮತ್ತು ಜಿಲ್ಲೆಯ ಜನತೆಯ ಪರ ನಿಲ್ಲಬೇಕು. ಬಡವರಿಗೆ ಬ್ಯಾಂಕ್‌ಗಳ ಬಾಗಿಲುಗಳನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ತೆರೆದಿದ್ದರೆ, ಹಾಲಿ ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಬ್ಯಾಂಕ್‌ಗಳ ಬಾಗಿಲುಗಳನ್ನು ಮುಚ್ಚಿಸಿದ್ದಾರೆ. ಸಾಲಮೇಳದ ಮೂಲಕ ಬಡವರಿಗೆ ಬ್ಯಾಂಕ್‌ಗಳನ್ನು ಹತ್ತಿರವಾಗಿಸಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕೂಡ ಈವರೆಗೆ ಈ ಬಗ್ಗೆ ಮಾತನಾಡದಿರುವುದು ವಿಪರ್ಯಾಸ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.
ಜಿಲ್ಲೆಯ ರಾಜಕೀಯ ನಾಯಕತ್ವವು ದಿವಾಳಿಯಾಗಿದೆ. ಜಿಲ್ಲೆ ಮೇಲೆ ಎಲ್ಲಾ ಕಡೆಯಿಂದಲೂ ದಾಳಿಯಾಗುತ್ತಿದೆ. ಜನಪ್ರತಿನಿಧಿಗಳು ಕುರುಡು ಕಣ್ಣಿನವರಾದರೆ ಅದರ ಫಲವನ್ನು ಅವರನ್ನು ಆರಿಸಿ ಕಳುಹಿಸಿದ ಮತದಾರರು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ದ.ಕ.ಜಿಲ್ಲೆ ಸಾಕ್ಷಿಯಾಗುತ್ತಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂತಹ ಕುರುಡು ಕಣ್ಣಿನ ಜನಪ್ರತಿನಿಧಿಗಳಿಗೆ ಮತದಾರರು ತಕ್ಕಪಾಠ ಕಲಿಸಲು ಮುಂದಾಗಬೇಕು ಎಂದು ದಿನೇಶ್ ಅಮೀನ್ ಮಟ್ಟು ಕರೆ ನೀಡಿದರು.
ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಹನೀಫ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜೆಡಿಎಸ್ ಮುಖಂಡರಾದ ಮುನೀರ್ ಮುಕ್ಕಚೇರಿ ಮತ್ತು ಲತೀಫ್ ವಳಚ್ಚಿಲ್, ಮಾಜಿ ತಾಪಂ ಸದಸ್ಯ ಎನ್.ಇ. ಮುಹಮ್ಮದ್, ಯುವ ಕಾಂಗ್ರೆಸ್ ಮುಖಂಡರಾದ ಲುಕ್‌ಮಾನ್ ಬಂಟ್ವಾಳ, ಸುಹೈಲ್ ಕಂದಕ್, ಶಬ್ಬೀರ್ ಸಿದ್ದಕಟ್ಟೆ, ಸಿಪಿಎಂ ಮುಖಂಡ ಯಾದವ ಶೆಟ್ಟಿ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಉಳ್ಳಾಲ ನಗರಸಭಾ ಸದಸ್ಯ ಮುಹಮ್ಮದ್ ಮುಕ್ಕಚೇರಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಯೋಗೀಶ್ ಶೆಟ್ಟಿ, ಮುಹಮ್ಮದ್ ಮುಸ್ತಫಾ, ಅಬೂಬಕರ್ ಬಾವಾ, ವಿಲ್ಲಿ ವಿಲ್ಸನ್, ಮಾಧುರಿ ಬೋಳಾರ್, ಮುಹಮ್ಮದ್ ಸಾಲಿ ಮರವೂರು, ಹಾಗೂ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳಾದ ಬಿ.ಎಂ. ಮಾಧವ, ಪ್ರಕಾಶ್, ಪುರುಷೋತ್ತಮ, ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.