ಸುರತ್ಕಲ್: ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ ಯತ್ನ; ದೂರು

ಮಂಗಳೂರು, ಜ.3: ನಗರದ ಹೊರವಲಯ ಸುರತ್ಕಲ್‌ನಲ್ಲಿ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಹಾಡಹಗಲೇ ತಲವಾರು ಬೀಸಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಕೃಷ್ಣಾಪುರ 5ನೇ ಬ್ಲಾಕ್ ನಿವಾಸಿ ಸಂದೇಶ್ (35) ಎಂಬವರ ಮೇಲೆ ಕೊಲೆಯತ್ನ ನಡೆದಿದ್ದು, ಅದೇ ಗ್ರಾಮದ ನಿವಾಸಿ ರಂಜಿತ್ ನೇತೃತ್ವದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಸಂದೇಶ್ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗುರುವಾರ ಬೆಳಗ್ಗೆ ಅವರು ಕೃಷ್ಣಾಪುರದ 5ನೇ ಬ್ಲಾಕ್‌ನ ಯುವಕ ಮಂಡಳಿ ಸಮೀಪ ನಿಂತು ಪರಿಚಯಸ್ಥರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ರಂಜಿತ್ ನೇತೃತ್ವದ ಮೂವರು ದುಷ್ಕರ್ಮಿಗಳ ತಂಡ ತಲವಾರು ಬೀಸಿದೆ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಸಂದೇಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ತಂಡದ ತಲವಾರು ದಾಳಿಯಲ್ಲಿ ಅದೃಷ್ಟವಶಾತ್ ಸಂದೇಶ್‌ಗೆ ಯಾವುದೇ ಗಾಯಗಳಾಗಿಲ್ಲ. ವಿಫಲ ಕೊಲೆಯತ್ನ ನಡೆಸಿದ ದುಷ್ಕರ್ಮಿಗಳು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಹಳೆ ವೈಷಮ್ಯ ಕಾರಣ: ಸಂದೇಶ್ ಮತ್ತು ರಂಜಿತ್ ಮೊದಲಿನಿಂದಲೂ ಸ್ನೇಹಿತರಾಗಿದ್ದರು. ಸಂಬಂಧಿಕರ ಮದುವೆ ವಿಷಯದಲ್ಲಿ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಸಂದೇಶ್ ಹಾಗೂ ರಂಜಿತ್ ನಡುವೆ ಈ ಮೊದಲು ಗಲಾಟೆಯಾಗಿತ್ತು. ದುಷ್ಕರ್ಮಿಗಳ ತಂಡದಿಂದ ಹಾಡಹಗಲೇ ನಡೆದ ದಾಳಿಗೆ ಹಳೆ ವೈಷಮ್ಯ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.