ಲೋಕಸಭಾ ಚುನಾವಣೆಯವರೆಗೆ ‘ಶಬರಿಮಲೆ ವಿವಾದ’ ಜೀವಂತವಾಗಿಡಲು ಬಿಜೆಪಿ ಹುನ್ನಾರ: ಸಚಿವ ಖಾದರ್

ಮಂಗಳೂರು, ಜ.3: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳಾ ಪ್ರವೇಶಕ್ಕೆ ಸಂಬಂಧಿಸಿ ಯಾವುದೇ ಅಹಿತಕರ ಘಟನೆಯಾಗದಂತೆ ಮಧ್ಯ ಪ್ರವೇಶಿಸಬೇಕಾಗಿದ್ದ ಕೇಂದ್ರ ಸರಕಾರವು ಇದೀಗ ಮೌನವಾಗಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆವರೆಗೂ ಈ ವಿವಾದವನ್ನು ಜೀವಂತ ವಾಗಿಡಲು ಮತ್ತು ಕೇರಳದಲ್ಲಿ ಗಲಾಟೆ ಎಬ್ಬಿಸಲು ಹುನ್ನಾರ ಮಾಡಿದೆ ಎಂದು ದ.ಕ.ಜಿಲ್ಲಾ ಸಚಿವ ಖಾದರ್ ಆರೋಪಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ವಿಚಾರದಲ್ಲಿ ಜನರ ಭಾವನೆ, ಆಚಾರ- ವಿಚಾರ, ಧಾರ್ಮಿಕ ಸಂಸ್ಕೃತಿ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ರಾಜ್ಯ ಸರಕಾರ ಅದನ್ನು ಪಾಲನೆ ಮಾಡದೆ ವಿಧಿಯಿಲ್ಲ. ಈ ಮೂಲಕ ಉದ್ಭವಿಸಿದ ಬಿಕ್ಕಟ್ಟನ್ನು ಸರಕಾರದ ಮಟ್ಟದಲ್ಲಿ ಪರಿಹರಿಸುವ ಜವಾಬ್ದಾರಿ ಕೇಂದ್ರದ್ದಾಗಿದೆ. ಕೇಂದ್ರ ಸರಕಾರಕ್ಕೆ ದೇವಾಲಯ ಪಾವಿತ್ರತೆಯ ಕಾಳಜಿ ಇದ್ದಿದ್ದರೆ ಸುಗ್ರೀವಾಜ್ಞೆ ಹೊರಡಿಸಿ, ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬಹುದಿತ್ತು ಅಥವಾ ಧಾರ್ಮಿಕ ಮುಖಂಡರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ಗೆ ಸಂದೇಶ ರವಾನೆ ಮಾಡಬಹುದಿತ್ತು. ಆದರೆ ಬಿಜೆಪಿಗೆ ಅದ್ಯಾವುದೂ ಬೇಡ. ಪ್ರಕರಣವನ್ನು ಮುಂದಿಟ್ಟುಕೊಂಡು ಕೇರಳದಲ್ಲಿ ಗಲಭೆಗೆ ಅನುವು ಮಾಡಿಕೊಡುತ್ತಿದೆ ಎಂದು ಹೇಳಿದರು.
ಹಿಂದೂ - ಮುಸ್ಲಿಂ ಸೌಹಾರ್ದದ ಪರಂಪರೆಯುಳ್ಳ ದೇಶದ ಏಕೈಕ ದೇವಸ್ಥಾನವಾಗಿರುವ ಶಬರಿಮಲೆಯ ಪಾವಿತ್ರ್ಯ ಕಾಪಾಡಿಕೊಂಡು ಬರಲು ಕೇಂದ್ರ ಸರಕಾರ ಪೂರಕ ವಾತಾವರಣ ಕಲ್ಪಿಸಬೇಕು. ಆದರೆ ಬಿಜೆಪಿ ನೇತೃತ್ವದ ಸರಕಾರ ಹಾಗೇ ಮಾಡುತ್ತಿಲ್ಲ. ಈ ಹಿಂದೆ ಶಾಬಾನು ಪ್ರಕರಣ, ಜಲ್ಲಿಕಟ್ಟು ವಿವಾದ, ಕಂಬಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ ಉದಾಹರಣೆಗಳಿವೆ ಎಂದು ಖಾದರ್ ಹೇಳಿದರು.
ನಳಿನ್ ಏಕೆ ಮಾತನಾಡುತ್ತಿಲ್ಲ ?: ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಅನೇಕ ಪ್ರಕರಣಗಳಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿದೆ. ಆದರೆ ಈ ವಿಚಾರವನ್ನು ಜೀವಂತವಾಗಿಡಲು ಬಿಟ್ಟಿದೆ. ಸಂಸದ ನಳಿನ್ ಕುಮಾರ್ ಕಟೀಲು ಕೂಡ ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಒಂದು ವಾಕ್ಯವನ್ನೂ ಮಾತನಾಡಲಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಕೋಮು ದ್ವೇಷ ಹೆಚ್ಚಿಸುವ ಭಾಷಣ ಮಾಡುತ್ತಿದ್ದಾರೆ ? ಜನರನ್ನು ಧಾರ್ಮಿಕವಾಗಿ ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಖಾದರ್ ಆರೋಪಿಸಿದರು.