ಸಂಯೋಜಿತ ‘ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆಗೆ ಸ್ಪಂದನೆ
ಮಂಗಳೂರು, ಜ.3: ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ‘ಆಯುಷ್ಮಾನ್ ಭಾರತ್ - ಆರೋಗ್ಯಕರ್ನಾಟಕ’ ಎಂಬ ಸಂಯೋಜಿತ ಯೋಜನೆಯನ್ನು ರಾಜ್ಯ ಸರಕಾರವು ಕಳೆದ ವರ್ಷದ ಅಕ್ಟೋಬರ್ 30ರಿಂದ ಜಾರಿಗೊಳಿಸಿದ್ದು, ಉತ್ತಮ ಸ್ಪಂದನ ವ್ಯಕ್ತವಾಗುತ್ತಿವೆ. ಈ ಯೋಜನೆಯಡಿ ರಾಜ್ಯದ ಎಲ್ಲ ನಾಗರಿಕರಿಗೆ ಪ್ರಾಥಮಿಕ ಹಂತದ ಮತ್ತು ದ್ವಿತೀಯ ಹಂತದ ಆರೋಗ್ಯ ರಕ್ಷಣೆ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ.
ಫಲಾನುಭವಿಗಳು ಯಾರು?
ಅರ್ಹತಾ ರೋಗಿಗಳು/ ಸಾಮಾನ್ಯ ರೋಗಿಗಳು: ಈ ಯೋಜನೆಯ ಸೌಲಭ್ಯ ಪಡೆಯುವ ರೋಗಿಗಳು ರಾಜ್ಯದ ನಿವಾಸಿಗಳಾಗಿರಬೇಕು ಮತ್ತು 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವವರಾಗಿರಬೇಕು. (ಬಿಪಿಎಲ್ ಮತ್ತು ಅಂತ್ಯೋದಯ). ಆಹಾರ ಭದ್ರತಾ ಕಾಯ್ದೆ ಪ್ರಕಾರ ಅರ್ಹತಾ ಕಾರ್ಡ್ ಇಲ್ಲದ ಹಾಗೂ ಆದ್ಯತೇತರ ಕಾರ್ಡ್(ಎಪಿಎಲ್) ಹೊಂದಿರುವವರಾಗಿರಬೇಕು.
ಯಾರಿಗೆ ಯಾವ ಸೌಲಭ್ಯ ಮತ್ತು ಎಷ್ಟು ಮೊತ್ತದ ಚಿಕಿತ್ಸೆ ಲಭ್ಯ ?
ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ರೆಫರಲ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ 5ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ (1650 ಚಿಕಿತ್ಸಾ ವಿಧಾನಗಳಿಗೆ) ಯನ್ನು ಪಡೆಯಬಹುದು. ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ 1.50 ಲಕ್ಷ ರೂ.ವರೆಗೆ ಚಿಕಿತ್ಸೆ ಒದಗಿಸಲಾಗುತ್ತದೆೆ. ಶೇ.30 ಸರಕಾರಿ ಅನುದಾನ ಮತ್ತು ಶೇ.70 ರೋಗಿಯೇ ಭರಿಸಬೇಕಾಗುತ್ತದೆ.
ಯಾವ ಸೌಲಭ್ಯ ಎಲ್ಲಿ ಸಿಗುತ್ತದೆ ?
ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಜ್ವರ, ಕೆಮ್ಮು, ವಾಂತಿ, ಬೇಧಿ ಮುಂತಾದ ಎಲ್ಲ ರೀತಿಯ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ಹೆರಿಗೆ ಸೇವೆ, ಡೆಂಗ್, ಮಲೇರಿಯಾ, ಮೂಳೆ ಮುರಿತ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು ಮುಂತಾದ ನಿಗದಿತ 294 ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುವುದು. 251 ಸಂಕೀರ್ಣ ದ್ವಿತೀಯ ಹಂತದ ಕಾಯಿಲೆಗಳಿಗೆ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲದಿದ್ದಲ್ಲಿ ರೋಗಿಗಳನ್ನು ಚಿಕಿತ್ಸೆಗಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.
ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮಂತಾದ ನಿಗದಿತ 935 ತೃತೀಯ ಹಂತದ ಆರೋಗ್ಯ ಸೇವೆಗಳಿಗೆ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೋಗಿಗಳನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು. 170 ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.ಒಮ್ಮೆ ರೆಫರಲ್ ಆದ ನಂತರ ರೋಗಿಗಳು ಚಿಕಿತ್ಸೆಗಾಗಿ ತಮಗೆ ಬೇಕಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಎಲ್ಲಿ ನೋಂದಣಿ ಮಾಡಬೇಕು?
ಅನಾರೋಗ್ಯವಾದಾಗ ರೋಗಿಗಳು ಆಧಾರ್‌ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ ಮಾಡಲಾಗುತ್ತದೆ. ರೋಗಿಗಳ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಅಥವಾ ಆಧಾರ್ ಕಾರ್ಡ್ ಮತ್ತು ಒಟಿಪಿ ಅಥವಾ ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್‌ಗಳ ಆಧಾರದಲ್ಲಿ ನೋಂದಣಿ ಮಾಡಲಾಗುತ್ತದೆ. ಈ ಯೋಜನೆಗೆ ಆಧಾರ್ ಸಂಖ್ಯೆ ಬಳಸಲು ರೋಗಿಯು ಸ್ವಯಂ ದೃಢೀಕರಣ ಪತ್ರ ನೀಡಬೇಕು. ರೋಗಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯ ಹೆಲ್ತ್‌ಕಾರ್ಡ್‌ನ್ನು ರೂ. 10 ಪಡೆದು ನೀಡಲಾಗುತ್ತದೆ. ನಂತರದಲ್ಲಿ ಆಸ್ಪತ್ರೆಗೆ ಹೋಗುವಾಗ ಈ ಕಾರ್ಡ್‌ನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು. ಸಾರ್ವತ್ರಿಕ ಆರೋಗ್ಯಕಾರ್ಡ್ ಕಳೆದು ಹೋದಲ್ಲಿ ಆಧಾರ್‌ಕಾರ್ಡ್ ಮತ್ತು ಪಡಿತರಕಾರ್ಡ್ ನೀಡಿ ಸರಕಾರಿ ಆಸ್ಪತ್ರೆಗಳಲ್ಲಿ ನಕಲು ಕಾರ್ಡ್‌ಗಳನ್ನು ರೂ.20 ಪಾವತಿಸಿ ಪಡೆಯಬಹುದು.
ಸರಕಾರಿ ಆದೇಶದಲ್ಲಿ ಪಟ್ಟಿ ಮಾಡಿರುವ ಎಮರ್ಜೆನ್ಸಿ ಕೋಡ್‌ಗಳಿಗೆ ತುರ್ತು ಸ್ಥಿತಿಯ ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅಲ್ಲಿಯೂ ರೋಗಿಯ ನೋಂದಣಿ ಮಾಡಲಾಗುತ್ತದೆ. ಆಧಾರ್‌ಕಾರ್ಡ್ ಇಲ್ಲದಿದ್ದಲ್ಲಿ ಪಡಿತರಚೀಟಿ ಆಧಾರದ ಮೇಲೆ ನೋಂದಣಿ ಮಾಡಲಾಗುತ್ತದೆ. ಇಂತಹ ರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರಚಿಕಿತ್ಸೆ ನೀಡಲಾಗುವುದು. ಆಧಾರ್‌ಕಾರ್ಡ್ ಹಾಜರುಪಡಿಸಿದ ನಂತರ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲು ಅವಕಾಶ ಸಿಗುತ್ತದೆ. ಕರ್ನಾಟಕ ಓನ್ ಕೇಂದ್ರಗಳಲ್ಲೂ ಆರೋಗ್ಯಕಾರ್ಡ್ ನೋಂದಣಿ ಮಾಡಲಾಗುತ್ತದೆ.
ಸೌಲಭ್ಯ ಪಡೆಯುವುದು ಹೇಗೆ ?
ಅನಾರೋಗ್ಯವಾದಾಗ ರೋಗಿಗಳು ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಬೇಕು. ವೈದ್ಯರು ತಪಾಸಣೆ ನಡೆಸಿ ಆ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ ನೀಡುತ್ತಾರೆ. ಇಲ್ಲದಿದ್ದಲ್ಲಿ ಸಮೀಪದ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರೆಫರ್ ಮಾಡುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಾಗ ದ್ವಿತೀಯ ಹಂತದ ಚಿಕಿತ್ಸೆಗಳು ಹಾಗೂ ತೃತೀಯ ಹಂತದ ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತದೆ. ಸರಕಾರಿ ಆದೇಶದಲ್ಲಿ ಪಟ್ಟಿ ಮಾಡಿರುವ 170 ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ತುರ್ತು ಚಿಕಿತ್ಸೆಗಳ ಹೊರತಾಗಿ ಅರ್ಹತೆ ರೋಗಿಗಳಾಗಲಿ ಅಥವಾ ಸಾಮಾನ್ಯ ರೋಗಿಗಳಾಗಲಿ ಸರಕಾರಿ ಆಸ್ಪತ್ರೆಯ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದಲ್ಲಿ ಆ ವೆಚ್ಚವನ್ನು ಸದರಿ ರೋಗಿಯೇ ಭರಿಸಬೇಕಾಗುತ್ತದೆ.
ಯೋಜನೆಯ ವ್ಯಾಪ್ತಿಗೆ ಒಳಪಡದವವರು
ಕಾರ್ಮಿಕರ ರಾಜ್ಯ ವಿಮಾಯೋಜನೆಯಡಿ ರಕ್ಷಣೆ ಪಡೆದಿರುವ ನಾಗರಿಕರು. ಉದ್ಯೋಗದಾತರಿಂದ ಆರೋಗ್ಯ ಭರವಸೆ ಅಥವಾ ಆರೋಗ್ಯ ವಿಮೆ ಯೋಜನೆಗಳ ರಕ್ಷಣೆ ಪಡೆದಿರುವ ನಾಗರಿಕರು, ಖಾಸಗಿ ಆರೋಗ್ಯ ಮಾ ಪಾಲಿಸಿಗಳನ್ನು ಸ್ವಯಂ ಆಗಿ ಮಾಡಿಕೊಂಡಿರುವ ನಾಗರಿಕರು, ಕೇಂದ್ರ ಸರಕಾರಿ ಆರೋಗ್ಯ ಯೋಜನೆಯಲ್ಲಿ ರಕ್ಷಣೆ ಪಡೆದಿರುವ ನಾಗರಿಕರು, ಕರ್ನಾಟಕ ಸರಕಾರ ನೌಕರರ (ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೂ ಕರ್ನಾಟಕ ಸರಕಾರದ ಸಿಬ್ಬಂದಿಗಳು, ಕರ್ನಾಟಕ ವಿಧಾನಸಭಾ (ಸದಸ್ಯರ ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೂ ರಾಜ್ಯ ವಿಧಾನಸಭೆಯ ಸದಸ್ಯರು.
ಜಿಲ್ಲೆಯಲ್ಲಿ 40 ಆಸ್ಪತ್ರೆಗಳು ಈ ಯೋಜನೆಯಡಿ ನೊಂದಣಿಗೊಂಡಿರುತ್ತವೆ. ಅದರಲ್ಲಿ 32 ಖಾಸಗಿ ಆಸ್ಪತ್ರೆ ಹಾಗೂ 8 ಸರಕಾರಿ ಆಸ್ಪತ್ರೆಗಳು ಸೇರಿವೆ. ಮಾಹಿತಿಗಾಗಿ ಆರೋಗ್ಯ ಕೇಂದ್ರದ ಆರೋಗ್ಯ ಮಿತ್ರರನ್ನು, ಆಶಾ ಕಾರ್ಯಕರ್ತರನ್ನು, ಆರೋಗ್ಯ ಕಾರ್ಯಕರ್ತರನ್ನು, ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ: 18004258330 ಗೆ ಕರೆ ಮಾಡಿ ನೋಂದಾಯಿತ ಆಸ್ಪತ್ರೆಗಳ ವಿವರ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.