ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಬಂಟ್ವಾಳ, ಜ.3: ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ಬಿ.ಸಿ.ರೋಡ್ ಬೈಪಾಸ್‍ನ ನಾಲ್ಕು ಮಾರ್ಗದ ಬಳಿ ಸ್ವಂತ ಕಟ್ಟಡದ ಕಾ.ದಿ.ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಪರಿಣಾಮ ಕಚೇರಿಯೊಳಗಿದ್ದ ಬಂಟ್ವಾಳ ತಾಲೂಕು ಬೀಡಿ-ಜನರಲ್ ಯೂನಿಯನ್ ಹಾಗೂ ಸಿಪಿಐ ಪಕ್ಷಕ್ಕೆ ಸಂಬಂಧಪಟ್ಟ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನ, ವಿವಾಹ-ಬೀಡಿ ಕಾಮೀಕರಿಗೆ ಸಂಬಂಧಿಸಿದ ದಾಖಲೆಗಳು, ವಿವಿಧ ಸವಲತ್ತಿನ ದಾಖಲೆಪತ್ರ, ಇನ್ನಿತರ ಕಡತಗಳು, ಟೇಬಲ್, ಕುರ್ಚಿ, ನೋಟಿಸ್ ಬೋಡ್ ಹಾಗೂ ಪಾರ್ಟಿಶೀಯನ್‍ಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿವೆ. ಘಟನೆಯಿಂದ ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕಿಡಿಗೇಡಿಗಳು ಕಚೇರಿಯ ಹಿಂಬಾಗಿಲನ್ನು ಮುರಿದು ಒಳನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿಬ್ಬಂದಿ ಹರ್ಷಿತ್ ಎಂಬವರು ಕಚೇರಿಯ ಬಾಗಿಲ ತೆರೆಯುವ ವೇಳೆ ಕಿಟಕಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಶಾಮಕದಳ ಅಗಮಿಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳದಲ್ಲಿ ಪೆಟ್ರೋಲ್ ಕ್ಯಾನ್ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿದ್ದಾರೆ.
ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಕಳೆದ ವರ್ಷ ಇದೇ ಕಚೇರಿಯ ಕಿಟಕಿಯ ಗಾಜಿಗೆ ಹಾನಿಗೈದು ಧ್ವಂಸಕ್ಕೆ ವಿಫಲ ಯತ್ನ ನಡೆದಿತ್ತು ಎಂದು ಹೇಳಲಾಗುತ್ತಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.