ಹಿಂಸೆಯ ಹರತಾಳ: ಎಸ್ ಡಿಪಿಐ ಕಾರ್ಯಕರ್ತರಿಗೆ ಇರಿತ
ಬಿಜೆಪಿ ಆರೆಸ್ಸೆಸ್ ಕಾರ್ಯಕರ್ತರಿಂದ ಎಲ್ಲೆಡೆ ದಾಂಧಲೆ

ಪೊಲೀಸ್, ಪತ್ರಕರ್ತರ ಮೇಲೂ ಹಲ್ಲೆ
ತಿರುವನಂತಪುರ,ಜ.3: ಶಬರಿಮಲೆ ದೇವಾಲಯಕ್ಕೆ ಋತುಮತಿ ವಯಸ್ಸಿನ ಇಬ್ಬರು ಮಹಿಳೆಯರ ಪ್ರವೇಶವನ್ನು ಪ್ರತಿಭಟಿಸಿ, ಬಿಜೆಪಿ ಹಾಗೂ ಕೇಸರಿ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಹರತಾಳದ ವೇಳೆ ಕೇರಳಾದ್ಯಂತ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ
ಶಬರಿಮಲೆಗೆ ಮಹಿಳೆಯ ಪ್ರವೇಶವನ್ನು ವಿರೋಧಿಸಿ ಶಬರಿಮಲೆ ಕ್ರಿಯಾ ಸಮಿತಿ ಹಾಗೂ ಅಂತಾರಾಷ್ಟ್ರೀಯ ಹಿಂದೂ ಪರಿಷದ್ (ಎಎಚ್‌ಪಿ) ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ 12 ತಾಸುಗಳ ಹರತಾಳಕ್ಕೆ ಕರೆ ನೀಡಿದ್ದವು. ತೆರೆದಿದ್ದ ಅಂಗಡಿಮುಂಗಟ್ಟು ಮೇಲೆ ದಾಳಿ ನಡೆಸಿದ್ದಾರಲ್ಲದೆ ಸಿಪಿಎಂ ಕಾರ್ಯಾಲಯದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ರಾಜ್ಯದ ವಿವಿಧೆಡೆ ಬಂದ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಆಡಳಿತಾರೂಢ ಸಿಪಿಎಂ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಹೊಡೆದಾಟದ ಘಟನೆಗಳು ನಡೆದಿರುವುದಾಗಿ ತಿಳಿದುಬಂದಿದೆ.
ತ್ರಿಶೂರಿನಲ್ಲಿ ಹರತಾಳದ ವೇಳೆ ಬಿಜೆಪಿ ಕಾರ್ಯಕರ್ತರ ಗುಂಪೊಂದು ಮೂವರು ಎಸ್‌ಡಿಪಿಐ ಕಾರ್ಯಕರ್ತರಿಗೆ ಇರಿದಿದ್ದಾರೆ. ಬುಧವಾರ ಬೆಳಗ್ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಓಡಾಟ ಆರಂಭಿಸಿದ್ದವಾದರೂ, ಪ್ರತಿಭಟನಕಾರರ ಕಲ್ಲೆಸೆತದಿಂದಾಗಿ ಅವುಗಳಲ್ಲಿ ಹಲವು ಹಾನಿಗೀಡಾಗಿವೆ. ಇದರಿಂದಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಉದ್ರಿಕ್ತ ಪ್ರತಿಭಟನಕಾರರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟಿಹಾಕಿದ್ದರಲ್ಲದೆ, ಕಲ್ಲುಗಳನ್ನಿರಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.
ಪಾಲಕ್ಕಾಡ್‌ನಲ್ಲಿ ಹರತಾಳ ಬೆಂಬಲಿಗರು ಸಿಪಿಐ ಕಾರ್ಯಾಲಯ ಹಾಗೂ ಅದರ ಮುಂದೆ ನಿಲ್ಲಿಸಲಾಗಿದ್ದ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ನಗರದಲ್ಲಿ ಸಂಚರಿಸುತ್ತಿದ್ದ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು, ಆಟೋರಿಕ್ಷಾಗಳು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆಯಲಾಗಿದೆ.
ಕಣ್ಣೂರು ಜಿಲ್ಲೆಯ ತಲಶ್ಯೇರಿಯಲ್ಲಿ ಸಿಪಿಎಂ ನಡೆಸುತ್ತಿದ್ದ ಸ್ಥಳೀಯ ಬೀಡಿ ಉತ್ಪಾದನಾ ಘಟಕದ ಮೇಲೆ ಪ್ರತಿಭಟನಕಾರರು ಕಚ್ಚಾಬಾಂಬ್ ಎಸೆದಿದ್ದಾರಾದರೂ ಅದು ಸ್ಫೋಟಗೊಂಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ 10 ಮಂದಿ ಸಂಘಪರಿವಾರದ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
► ತಲಶ್ಯೇರಿ: ಕಚ್ಚಾಬಾಂಬ್ ಎಸೆತ
ತಲಶ್ಯೇರಿಯಿಂದ 17 ಕಿ.ಮೀ. ದೂರದ ನೆಡುಮಂಗಾಡು ಪೊಲೀಸ್ ಠಾಣೆಯ ಮೇಲೆ ಇನ್ನೊಂದು ಕಚ್ಚಾ ಬಾಂಬ್ ಎಸೆಯಲಾಗಿದೆ. ಆದರೂ ಠಾಣೆಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿಲ್ಲ.
ಪ್ರತಿಭಟನಕಾರರು ಪತ್ರಕರ್ತರ ಮೇಲೆ ದಾಳಿ ನಡೆಸಿದ್ದನ್ನು ಪ್ರತಿಭಟಿಸಿ ತಿರುವನಂತಪುರದಲ್ಲಿ ಪತ್ರಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹರತಾಳದ ಹಿನ್ನೆಲೆಯಲ್ಲಿ ತಿರುವನಂತಪುರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಂಗಡಿಮುಂಗಟ್ಟೆಗಳು ಮುಚ್ಚಿದ್ದವು.
ಕೋಝಿಕ್ಕೋಡ್ ಕೆಲವು ವರ್ತಕರು ಹರತಾಳದ ಕರೆಗೆ ಓಗೊಡದೆ ತಮ್ಮ ಅಂಗಡಿ ಮುಂಗಟ್ಟೆಗಳನ್ನು ತೆರೆದಿದ್ದರು. ರಾಜ್ಯದ ಪ್ರಮುಖ ನಗರಗಳಾದ ಕೊಚ್ಚಿ ಹಾಗೂ ಕೊಲ್ಲಂಗಳಲ್ಲಿಯೂ ಪೊಲೀಸ್ ಭದ್ರತೆಯ ನಡುವೆ ಕೆಲವು ಅಂಗಡಿಗಳು ತೆರೆದುಕೊಂಡಿದ್ದವು.
ರಾಜ್ಯದ ವಿವಿಧೆಡೆ ಶಾಂತಿಭಂಗದ ಆರೋಪದಲ್ಲಿ ಹಲವಾರು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹರತಾಳದ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿದ್ದ ರಾಜ್ಯ ವಿವಿ ಪರೀಕ್ಷೆಗಳನ್ನು ಕೂಡಾ ಮುಂದೂಡಲಾಗಿತ್ತು.
► ಸಿಪಿಎಂ ಕಾರ್ಯಾಲಯಗಳ ಮೇಲೆ ದಾಳಿ
ಎರ್ನಾಕುಲಂ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಸಿಪಿಎಂ ಕಚೇರಿಗಳ ಮೇಲೆ ಕಲ್ಲೆಸೆಯಲಾಗಿದೆ. ಪಾಲಕ್ಕಾಡ್‌ನಲ್ಲಿ ಸಿಪಿಎಂ ನಡೆಸುತ್ತಿರುವ ಗ್ರಂಥಾಲಯವನ್ನು ಧ್ವಂಸಗೊಳಿಸಲಾಗಿದೆ.
► ಕಾಂಗ್ರೆಸ್ ಪ್ರತಿಭಟನೆ
ಈ ಮಧ್ಯೆ ಪಿಣರಾಯ್ ವಿಜಯನ್ ಅವರು ಪ್ರಯಾಣಿಸುತ್ತಿದ್ದ ವಾಹನ ವ್ಯೂಹಕ್ಕೆ ಕರಿಪತಾಕೆ ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಎದುರಿಗಿದ್ದ ಪೈಲಟ್ ಕಾರು ಢಿಕ್ಕಿ ಹೊಡೆದು ಅವರು ಗಾಯಗೊಂಡಿದ್ದಾರೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಕಾಂಗ್ರೆಸ್ ಗುರುವಾರ ಕರಾಳ ದಿನ ಆಚರಿಸಿದೆ.
ಬಿಂದು ಹಾಗೂ ಕನಕದುರ್ಗ ಎಂಬ ಇಬ್ಬರು 40ರ ಹರೆಯದ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದ್ದರು. 10ರಿಂದ 50 ವರ್ಷದೊಳಗಿನವರಿಗೆ ಶಬರಿಮಲೆ ದೇಗುಲ ಪ್ರವೇಶ ನಿಷೇಧಿಸಿರುವ ಶತಮಾನಗಳ ಸಂಪ್ರದಾಯವನ್ನು ಉಲ್ಲಂಘಿಸಿರುವುದು ಸಂಘ ಪರಿವಾರದ ಆಕ್ರೋಶಕ್ಕೆ ಕಾರಣವಾಗಿತ್ತು.
► ಕಲ್ಲೆಸೆತದ ಗಾಯಾಳು ಮೃತ್ಯು
ಪಟ್ಟಣಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಬುಧವಾರ ಸಿಪಿಎಂ ಕಾರ್ಯಕರ್ತರ ಗುಂಪೊಂದು ಪಕ್ಷದ ಕಾರ್ಯಾಲಯದ ಮೇಲಿನಿಂದ ಪ್ರತಿಭಟನಕಾರರ ಮೇಲೆ ಕಲ್ಲೆಸೆದಿದ್ದರಿಂದಾಗಿ, 55 ವರ್ಷದ ಉನ್ನಿನಾಥನ್ ಎಂಬವರು ಗಂಭೀರ ಗಾಯಗೊಂಡಿದ್ದು, ಆನಂತರ ಅವರು ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಮೂಲಗಳು ತಿಳಿಸಿವೆ.
ಆದಾಗ್ಯೂ ಮೃತ ಚಂದ್ರು ಉನ್ನಿನಾಥ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಸ್ತ್ರೀಯರ ಪ್ರವೇಶವನ್ನು ವಿರೋಧಿಸಿ ಬುಧವಾರ ಶಬರಿಮಲೆ ಕ್ರಿಯಾ ಸಮಿತಿಯು ಪಂದಳಂನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಉನ್ನಿನಾಥನ್ ಪಾಲ್ಗೊಂಡಿದ್ದರೆನ್ನಲಾಗಿದೆ. ಈ ದಾಳಿ ಘಟನೆಯಲ್ಲಿ 9 ಮಂದಿ ಭಾಗಿಯಾಗಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ. ದೇಗುಲ ಆಡಳಿತದ ವಿರುದ್ಧ ನ್ಯಾಯಾಂಗ ನಿಂದನೆ
► ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ಈ ಮಧ್ಯೆ ಇಬ್ಬರು ಮಹಿಳೆಯರ ಪ್ರವೇಶದ ಬಳಿಕ ಶುದ್ಧೀಕರಣ ಕ್ರಿಯೆ ನಡೆಸಲು ದೇವಾಲಯವನ್ನು ಮುಚ್ಚಿದ ದೇಗುಲದ ಆಡಳಿತದ ವಿರುದ್ಧ ನ್ಯಾಯವಾದಿಗಳ ಗುಂಪೊಂದು ಸಲ್ಲಿಸಿದ ನ್ಯಾಯಾಂಗ ನಿಂದನೆಯ ಅರ್ಜಿಯ ತ್ವರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡುವ ಸುಪ್ರೀಂಕೋರ್ಟ್‌ನ ತೀರ್ಪಿನ ಮರುಪರಿಶೀನೆ ಕೋರಿ ಸಲ್ಲಿಸಲಾದ ಅರ್ಜಿಗಳ ಆಲಿಕೆ ಬಾಕಿಯಿದ್ದು, ಆವಾಗಲೇ ಈ ನ್ಯಾಯಾಂಗ ನಿಂದನೆಯ ಆರೋಪದ ಅರ್ಜಿಯನ್ನು ಆಗಲೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಮಹಿಳೆಯರಿಬ್ಬರ ಪ್ರವೇಶದ ಬಳಿಕ ದೇಗುಲದ ಆಡಳಿತಾಧಿಕಾರಿಗಳು ಶುದ್ಧೀಕರಣ ಕ್ರಿಯೆಗಾಗಿ ದೇವಾಲಯವನ್ನು ಮುಚ್ಚಿದ್ದರು. ಇದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆಯೆಂದು ಭಾರತೀಯ ಯುವನ್ಯಾಯವಾದಿಗಳ ಸಂಘದ ಪರವಾಗಿ ವಾದಿಸಿದ ಪಿ.ವಿ. ದಿನೇಶ್ ವಾದಿಸಿದ್ದರು.
ಹಿಂಸಾಚಾರದ ಹಿಂದೆ ಆರೆಸ್ಸೆಸ್-ಬಿಜೆಪಿ ಕೈವಾಡ: ಪಿಣರಾಯಿ
ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಬಳಿಕ ಭುಗಿಲೆದ್ದಿರುವ ಹಿಂಸಾಚಾರದ ಹಿಂದೆ ಆರೆಸ್ಸೆಸ್-ಬಿಜೆಪಿಯ ಕೈವಾಡವಿದೆಯೆಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆರೋಪಿಸಿದ್ದಾರೆ.
ರಾಜ್ಯ ಸರಕಾರವು ಆಸ್ತಿಕರ ನಂಬಿಕೆಗಳಿಗೆ ವಿರುದ್ಧವಾಗಿಲ್ಲ. ಆದರೆ ಅದು ಸಂವಿಧಾನಕ್ಕೆ ಸಂಪೂರ್ಣವಾದ ನಿಷ್ಠೆಯನ್ನು ಹೊಂದಿದೆಯೆಂದು ವಿಜಯನ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.
‘‘ಹರತಾಳ ಬೆಂಬಲಿಗರು ನಡೆಸುತ್ತಿರುವ ಹಿಂಸಾಚಾರ ಯೋಜಿತವಾದುದು. ಬುಧವಾರದಿಂದೀಚೆಗೆ ವ್ಯಾಪಕವಾಗಿ ಹಿಂಸಾಚಾರ ನಡೆಯುತ್ತಿದ್ದು, ಮಹಿಳೆಯರು ಸೇರಿದಂತೆ ಮಾಧ್ಯಮಮಂದಿ ಹಾಗೂ ಪೊಲೀಸರ ಮೇಲೆಯೂ ದಾಳಿ ನಡೆದಿದೆ’’ ಎಂದು ವಿಜಯನ್ ತಿಳಿಸಿದ್ದಾರೆ.
ಹರತಾಳದ ಬೆಂಬಲಿಗರು 79 ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಹಾನಿಯುಂಟು ಮಾಡಿದ್ದಾರೆ ಹಾಗೂ 31 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದವರು ತಿಳಿಸಿದ್ದಾರೆ.
‘‘ದಾಳಿಗೊಳಗಾದವರಲ್ಲಿ ಬಹುತೇಕ ಮಂದಿ ಮಹಿಳೆಯರು. ಸಂಘಪರಿವಾರದ ಬೆಂಬಲಿಗರು ಹಲವಾರು ಅಂಗಡಿ ಮುಂಗಟ್ಟೆಗಳಿಗೆ ಹಾನಿಯುಂಟು ಮಾಡಿದೆ. ರಾಜ್ಯಾದ್ಯಂತ ಸಿಪಿಎಂ, ಸಿಪಿಐನ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ’’ ಎಂದು ವಿಜಯನ್ ಹೇಳಿದ್ದಾರೆ.