ಮೃತ 210 ಒಳಚರಂಡಿ ಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ

ಹೊಸದಿಲ್ಲಿ, ಜ.3: 1993ರಿಂದೀಚೆಗೆ ದೇಶದ ವಿವಿಧೆಡೆ ಒಳಚರಂಡಿ ಅಥವಾ ಮಲಗುಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೃತಪಟ್ಟ 210 ಮಂದಿಯ ಕುಟುಂಬಿಕರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಿರುವುದಾಗಿ ಕೇಂದ್ರ ಸರಕಾರವು ರಾಜ್ಯಸಭೆಗೆ ಗುರುವಾರ ತಿಳಿಸಿದೆ.
ಪ್ರಶ್ನೋತ್ತರ ವೇಳೆ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು 1993ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಮೃತ ಒಳಚರಂಡಿ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರ ಸರಕಾರ 10 ಲಕ್ಷ ರೂ. ಪರಿಹಾರ ನೀಡುತ್ತಿದೆಯೆಂದು ತಿಳಿಸಿದರು.
1993ರಿಂದೀಚೆಗೆ ಒಳಚರಂಡಿ ಅಥವಾ ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ 331 ಮಂದಿ ಮೃತಪಟ್ಟಿದ್ದು, ಅವರಲ್ಲಿ 210 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆಯೆಂದರು.
ಕೇಂದ್ರ ಸರಕಾರವು ದೇಶದ ಒಳಚರಂಡಿ ಕಾರ್ಮಿಕರನ್ನು ಪುನರ್ವಸತಿಗೊಳಿಸುತ್ತಿದೆ. ದೇಶಾದ್ಯಂತ 13,585 ಮಂದಿಗೆ ಸರಕಾರವು ನೈಪುಣ್ಯತೆಯ ತರಬೇತಿಯನ್ನು ನೀಡಿದ್ದು, ಅವರಿಗೆ ಈತನಕ 950 ಕೋಟಿ ರೂ. ನೆರವು ನೀಡಿರುವುದಾಗಿ ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಹತ್ತನೆಯ ತರಗತಿ ಆನಂತರದ ಶಿಕ್ಷಣದ ಶಿಷ್ಯ ವೇತನ ಯೋಜನೆಗಾಗಿ 327.39 ಕೋಟಿ ರೂ.ಮೀಸಲಿರಿಸಿದೆಯೆಂದು ಅವರು ಹೇಳಿದರು.







