ಕೆರೆ ಜಾಗ ಕಬಳಿಕೆ ಪ್ರಕರಣ: ವಕೀಲ ಸೇರಿ ಮೂವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು, ಜ.3: ತುಮಕೂರು ಜಿಲ್ಲೆಯ ಕೋರ ಹೋಬಳಿ ಜಿನಗಾ ಗ್ರಾಮದ ಕೆರೆ ಜಾಗವನ್ನು ಕಬಳಿಕೆ ಮಾಡಿದ್ದ ಪ್ರಕರಣದಲ್ಲಿ ವಕೀಲರೊಬ್ಬರು ಸೇರಿ ಮೂವರಿಗೆ ತಲಾ ಮೂರು ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ವಿಧಿಸಿ ಭೂ ಕಬಳಿಕ ತಡೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಜಿನಗಾ ಗ್ರಾಮದ ಕೆರೆ ಜಾಗ ಒತ್ತುವರಿ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಎನ್.ನ್ಯಾರಾಯಣ, ನ್ಯಾಯಾಂಗ ಸದಸ್ಯ ಬಾಲಕೃಷ್ಣ ಮತ್ತು ಕಂದಾಯ ಸದಸ್ಯ ಜಯರಾಮೇ ರಾಜ್ ಅರಸ್ ಅವರನ್ನು ಒಳಗೊಂಡ ನ್ಯಾಯಪೀಠ, ತುಮಕೂರಿನ ವಕೀಲ ಶಿವರಾಮು, ವೆಂಕಟರಾಮಯ್ಯ ಮತ್ತು ಚಿಕ್ಕವೀರಯ್ಯ ಅವರು ತಪ್ಪಿತಸ್ಥರು ಎಂದು ತೀರ್ಮಾನಿಸಿ ಮೂರು ವರ್ಷ ಜೈಲು ಮತ್ತು 25 ಸಾವಿರ ರೂ.ದಂಡ ವಿಧಿಸಿದೆ.
ಇದೇ ವೇಳೆ ಮೂವರಿಗೆ ವಿಧಿಸಿದ ಮೂರು ವರ್ಷದ ಜೈಲು ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿರಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ. ತಪ್ಪಿತಸ್ಥರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವರೆಗೆ ಶಿಕ್ಷೆಯ ಅಮಾನತು ಆದೇಶ ಜಾರಿಯಲ್ಲಿರುತ್ತದೆ.
ಪ್ರಕರಣವೇನು: ತುಮಕೂರು ತಾಲೂಕಿನ ಜಿನಗಾ ಗ್ರಾಮದ ಕೆರೆಗೆ ಸೇರಿದ ಸರ್ವೇ ನಂಬರ್ 13/1ರಲ್ಲಿನ 7.13 ಎಕರೆ ಜಾಗವನ್ನು 1978ರಲ್ಲಿ ಕೆರೆ ನಿರ್ಮಿಸಲು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡು, ಭೂ ಮಾಲಕರಿಗೆ ಪರಿಹಾರ ನೀಡಿತ್ತು. ನಂತರ ಚಿಕ್ಕವೀರಯ್ಯ, ವೆಂಕಟರಾಮಯ್ಯ ಹಾಗೂ ತುಮಕೂರು ವಕೀಲ ಶಿವರಾಮು ಅವರು ಈ ಕೆರೆ ಜಾಗವನ್ನು ಕಬಳಿಕೆ ಮಾಡಿಕೊಂಡಿದ್ದರು. ಈ ಕುರಿತು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಗುರುವಾರ ಈ ಆದೇಶ ಮಾಡಿದೆ. ತಪ್ಪಿತಸ್ಥರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಪ್ರಕರಣದಲ್ಲಿ ಸರಕಾರದ ಪರ ಸರಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ವಾದ ಮಂಡಿಸಿದ್ದರು.







