ಫೆಬ್ರವರಿಯಲ್ಲಿ ಚಂದ್ರಯಾನ-2 ಉಡಾವಣೆ ಸಾಧ್ಯತೆ

ಹೈದರಾಬಾದ್,ಜ.3: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಮುಂದಿನ ತಿಂಗಳು ಉಡಾವಣೆಗೊಳಿಸುವ ಸಾಧ್ಯತೆಯಿದೆಯೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ತಿಳಿಸಿದೆ.
ಚಂದ್ರಯಾನ-2 ಉಡಾವಣೆಯನ್ನು ಮುಂದಿನ ವರ್ಷ ನಡೆಸಲು ನಾವೆಲ್ಲರೂ ಕಷ್ಟಪಟ್ಟು ಶ್ರಮಿಸುತ್ತಿದ್ದೇವೆ. ಫೆಬ್ರವರಿ ಮಧ್ಯದೊಳಗೆ ಚಂದ್ರಯಾನ-2 ಉಡಾವಣೆಗೊಳ್ಳುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ದಿನಾಂಕವನ್ನು ನಿಗದಿಪಡಿಸಿಲ್ಲವೆಂದು ಇಸ್ರೋ ಮೂಲಗಳು ತಿಳಿಸಿವೆ.
3290 ಕೆ.ಜಿ. ಭಾರದ ಚಂದ್ರಯಾನ-2 ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಯೋಜನೆಯಾಗಿದ್ದು, ಅದು ಆರ್ಬಿಟರ್ ನೌಕೆ,ಲ್ಯಾಂಡರ್ ಹಾಗೂ ರೋವರ್ ಅನ್ನು ಒಳಗೊಂಡಿದೆ.
ಲ್ಯಾಂಡರ್ ನೌಕೆಯು ಚಂದ್ರನ ಮೇಲ್ಮೈಯಲ್ಲಿರುವ ನಿರ್ದಿಷ್ಟ ತಾಣದ ಮೇಲೆ ಇಳಿಯಲಿದೆ ಹಾಗೂ ಅದು ಇಳಿದ ಜಾಗದ ಆಸುಪಾಸಿನಲ್ಲಿ ರೋವರ್ ಯಂತ್ರವನ್ನು ಚಂದ್ರನ ನೆಲದಲ್ಲಿ ಸಂಶೋಧನಾ ಕಾರ್ಯಗಳಿಗೆ ನಿಯೋಜಿಸಲಿದೆ ಎಂದು ಇಸ್ರೋ ತಿಳಿಸಿದೆ.
ಆರು ಚಕ್ರಗಳ ರೋವರ್ ಯಂತ್ರವು ಚಂದ್ರನ ಮೇಲ್ಮೈಯನ್ನು ಪರಿಶೀಲಿಸಲಿಗೆ ಹಾಗೂ ದತ್ತಾಂಶವನ್ನು ಸಂಗ್ರಹಿಸಲಿದೆ. ಚಂದ್ರನ ಮಣ್ಣಿನ ವಿಶ್ಲೇಷಣೆಗೆ ಈ ದತ್ತಾಂಶಗಳು ಅತ್ಯಂತ ಉಪಯುಕ್ತವಾಗಲಿದೆ
ಆರ್ಬಿಟರ್ ನೌಕೆಯು ಚಂದ್ರನ ಕಕ್ಷೆಗಳ ಮೂಲಕ ಸುತ್ತಲಿದ್ದು, ರೋವರ್ ಕಳುಹಿಸುವ ದತ್ತಾಂಶಗಳನ್ನು ಭೂಮಿಗೆ ರವಾನಿಸಲಿದೆ.
ಭಾರತದ ಚೊಚ್ಚ ಚಂದ್ರನ ಶೋಧ ಯೋಜನೆಯಾದ ಚಂದ್ರಯಾನ-1ನ್ನು ಭಾರತ 2008ರಲ್ಲಿ ಉಡಾವಣೆಗೊಳಿಸಿತ್ತು ಹಾಗೂ ಅದು ಆಗಸ್ಟ್ 2009ರವರೆಗೆ ಕಾರ್ಯನಿರ್ವಹಿಸಿತ್ತು.