ಆರೋಪಿ ಮೇಲಿನ ಆರೋಪ ಸಾಬೀತು: ಜ.7ಕ್ಕೆ ಶಿಕ್ಷೆ ಪ್ರಕಟ
ವಿಷ ಉಣಿಸಿ ಮಕ್ಕಳಿಬ್ಬರ ಕೊಲೆ ಪ್ರಕರಣ
ಕುಂದಾಪುರ, ಜ.3: ಎರಡು ವರ್ಷಗಳ ಹಿಂದೆ ಬೈಂದೂರು ಗಂಗನಾಡು ಎಂಬಲ್ಲಿ ತನ್ನ ಮಕ್ಕಳಿಬ್ಬರಿಗೆ ವಿಷ ಉಣಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಜ.7ರಂದು ಪ್ರಕಟಿಸುವುದಾಗಿ ಆದೇಶ ನೀಡಿದೆ.
ಆರೋಪಿಯನ್ನು ಬೈಂದೂರು ಗಂಗನಾಡಿನ ಶಂಕರನಾರಾಯಣ ಹೆಬ್ಬಾರ್ (48) ಎಂದು ಗುರುತಿಸಲಾಗಿದೆ. 2016ರ ಅ.16ರಂದು ಶಂಕರನಾರಾಯಣ ಹೆಬ್ಬಾರ್ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನು. ಇದರ ಪರಿಣಾಮ ಮಕ್ಕಳಾದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದ ಅಶ್ವಿನ್ ಕುಮಾರ್ ಹೆಬ್ಬಾರ್(15) ಹಾಗೂ ಐಶ್ವರ್ಯಾ ಲಕ್ಷ್ಮೀ ಹೆಬ್ಬಾರ್(13) ಮೃತಪಟ್ಟಿದ್ದರು. ಪತ್ನಿ ಮಹಾಲಕ್ಷ್ಮೀ ಹಾಗೂ ಶಂಕರ ನಾರಾಯಣ ಹೆಬ್ಬಾರ್ ಅಪಾಯದಿಂದ ಪಾರಾಗಿದ್ದರು.
ಈ ಸಂದರ್ಭದಲ್ಲಿ ಪತ್ತೆಯಾದ ಮರಣಪತ್ರದಿಂದ ಪ್ರೇಮ ಪ್ರಸಂಗವೇ ಈ ಕೃತ್ಯಕ್ಕೆ ಕಾರಣ ಎಂಬುದು ತಿಳಿದುಬಂತು. ಪತ್ನಿ, ಮಕ್ಕಳನ್ನು ತೊರೆದಿದ್ದ ಶಂಕರನಾರಾಯಣ ಹೆಬ್ಬಾರ್ ಪ್ರಿಯತಮೆಯ ಜತೆಗೆ ವಾಸಿಸುತ್ತಿದ್ದನು. ಆಕೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೇಸತ್ತ ಹೆಬ್ಬಾರ್ ಈ ಕೃತ್ಯ ಎಸಗಿದ್ದ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಒಟ್ಟು 43 ಸಾಕ್ಷಿಗಳ ಪೈಕಿ 17 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಯನ್ನು ದೋಷಿ ಎಂಬು ದಾಗಿ ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಪತ್ನಿಯೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸಹಾಯಕ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ವಾದಿಸಿದ್ದರು.







