ಸಾಮಾಜಿಕ ಜಾಲತಾಣದಲ್ಲಿ ಯೇಸುಕ್ರಿಸ್ತರ ಅವಮಾನ: ಕ್ರಮಕ್ಕೆ ಕೆಥೊಲಿಕ್ ಸಭಾ ಆಗ್ರಹ
ಉಡುಪಿ, ಜ.3: ಸಾಮಾಜಿಕ ಜಾಲತಾಣಗಳಲ್ಲಿ ಯೇಸುಕ್ರಿಸ್ತರ ಬಗ್ಗೆ ಅವಮಾನ ಮಾಡಿರುವುದಕ್ಕೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಗ್ರಹಿಸಿದೆ.
ವಿಶ್ವದಾದ್ಯಂತ ಕ್ರೈಸ್ತ ಸಮುದಾಯ ಡಿ.25ರಂದು ಕ್ರಿಸ್ಮಸ್ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭು ಏಸುಕ್ರಿಸ್ತರನ್ನು ಹಾಗೂ ಧರ್ಮಭಗಿನಿಯರನ್ನು ನಿಂದಿಸಿದ ಪೋಸ್ಟ್ ವೈರಲ್ ಆಗುತ್ತಿದೆ. ರವೀಂದ್ರ ಗೌಡ ಪಾಟೀಲ ಎಂಬಾತ ಪ್ರಭು ಏಸುಕ್ರಿಸ್ತರ ಭಾವಚಿತ್ರದೊಂದಿಗೆ ಅಶ್ಲೀಲವಾದ ಅರೆನಗ್ನ ಮಹಿಳೆಯ ಚಿತ್ರವನ್ನು ಲಗತ್ತಿಸಿ ವಿಕೃತವಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲದೆ, ಸಮಾಜದ ಸಾಮಾರಸ್ಯ ಕದಡುವ ಹುನ್ನಾರ ಇದರಲ್ಲಿದೆ. ಆದುದರಿಂದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಂಡು, ಇಂತಹ ಘಟನೆಗಳು ಪುನರಾವರ್ತನೆ ಯಾಗದಂತೆ ಪೊಲೀಸ್ ಇಲಾಖೆಯನ್ನು ಧರ್ಮಪ್ರಾಂತದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಒತ್ತಾಯಿಸಿದ್ದಾರೆ.