ಬಂಟ್ವಾಳ: ಸರ್ವಧರ್ಮ ಸಮ್ಮೇಳನ
ಬಂಟ್ವಾಳ, ಜ. 3: ಮಂಗಳೂರು ಎಜುಕೇಶನ್ ಎನ್‌ಹ್ಯಾನ್ಸ್ ಮೆಂಟ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಸನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಿತು.
ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ಪೂರ್ವಿಜರು ಹೋರಾಟದ ಮೂಲಕ ಭಾರತವನ್ನು ನಿರ್ಮಿಸಿದ್ದು, ನಾವೆಲ್ಲರು ಸೇರಿ ಪ್ರೀತಿ ಹಾಗೂ ಪರಸ್ಪರ ಸಹಬಾಳ್ವೆಯ ಸಧೃಢ ಭಾರತೀಯರನ್ನು ಕಟ್ಟಿ, ದೇಶದ ಭವಿಷ್ಯವನ್ನು ರೂಪಿಸಬೇಕಾಗಿದೆ ಎಂದರು.
50 ವರ್ಷಗಳಿಂದ ದೇಶದಲ್ಲಿ ನಡೆದಿರುವ ಕೋಮುಗಲಭೆಗಳನ್ನು ನಿಗ್ರಹ ಮಾಡುವುದಕ್ಕಾಗಿ ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿದ್ದು, ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಹೇಳಿದರು.
ಮೊಗರ್ನಾಡ್ ಮದರ್ ಆಫ್ ಗಾಡ್ ಚರ್ಚ್‌ನ ರೆ.ಡಾ. ಮಾರ್ಕ್ ಕ್ಯಾಸ್ಟಲಿನೋ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾಂದ ಸ್ವಾಮೀಜಿ, ಚೊಕ್ಕಬೆಟ್ಟು ಜುಮಾ ಮಸೀದಿಯ ಇಮಾಮ್ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪ್ರೀತಿ, ಸೌಹಾರ್ದ, ಭಾವೈಕ್ಯತೆಯ ಹಾಗೂ ಶಾಂತಿಯ ಸಂದೇಶ ಸಾರಿದರು.
ಇದೇ ವೇಳೆ ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂಗಳೂರು ಎಜುಕೇಶನ್ ಎನ್‌ಹ್ಯಾನ್ಸ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಪ್ರಾಂಶುಪಾಲ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಮಂಗಳೂರು ಎಜುಕೇಶನ್ ಎನ್‌ಹ್ಯಾನ್ಸ್ ಮೆಂಟ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ಮಮ್ತಾಝ್ ಅಲಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ತಂಶೀರಾ ವಂದಿಸಿದರು. ಫಾತಿಮಾ ಸುಹಾದ ನಿರೂಪಿಸಿದರು.