'ಮೀನುಗಾರರ ಪತ್ತೆ ಹಚ್ಚುವಲ್ಲಿ ರಾಜ್ಯ, ಕೇಂದ್ರ ಸರ್ಕಾರ ವಿಫಲ' ಮೀನುಗಾರರಿಂದ ಪ್ರತಿಭಟನೆ

ಭಟ್ಕಳ, ಜ. 3: ಕಳೆದ 15 ದಿನಗಳಿಂದ ಮೀನುಗಾರಿಕೆಗೆ ತೆರಳಿದ್ದ ನಾಪತ್ತೆಯಾಗಿದ್ದ ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲಗೊಂಡಿವೆ ಎಂದು ಆರೋಪಿಸಿ ಇಲ್ಲಿನ ಸಾವಿರಕ್ಕೂ ಹೆಚ್ಚು ಮೀನುಗಾರರು ಪ್ರತಿಭಟನೆ ನಡೆಸುವುದರ ಮೂಲಕ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದು ನಾಪತ್ತೆಯಾಗಿರುವ ಮೀನುಗಾರರನ್ನು ಕೂಡಲೆ ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ಈ ಕುರಿತಂತೆ ಗುರುವಾರದಂದು ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿರುವ ನೂತನ ಮೀನುಮಾರುಕಟ್ಟೆಯ ಬಳಿ ಸೇರಿ ಪ್ರತಿಭಟನೆ ನಡೆಸಿದ ಸಾವಿರಾರು ಮೀನುಗಾರರು ಮೆರವಣೆಗೆಯ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತಲುಪಿ ಮೀನುಗಾರರನ್ನು ಹುಡುಕಿಕೊಡುವಂತೆ ಮನವಿ ಸಲ್ಲಿಸಿದರು.
ತಂತ್ರಜ್ಞಾನ ಅಭಿವೃದ್ಧಿಯು ಈ ಯುಗದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಬೋಟಿನಲ್ಲಿ ಜಿಪಿಎಸ್ ತಂತ್ರಾಂಶ ಹೊಂದಿದ್ದರೂ ಒಂದು ಬೋಟನ್ನು ಪತ್ತೆ ಹಚ್ಚಲು ಸರ್ಕಾರ ಹಾಗೂ ತನಿಖಾ ಸಂಸ್ಥೆಗಳಿಂದ ಸಾಧ್ಯವಾಗಿಲ್ಲ ಎಂದಾದರೆ, ಕೇವಲ ಮೀನುಗಾರರ ಸುರಕ್ಷೆಯಷ್ಟೆಯಲ್ಲದೆ ಇದು ದೇಶದ ಸುರಕ್ಷತೆಯ ಪ್ರಶ್ನೆಯಾಗಿದೆ ಎಂದು ಮನವಿಪತ್ರದಲ್ಲಿ ಆರೋಪಿಸಲಾಗಿದೆ.
ಮೀನುಗಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮೆರವಣೆಗೆಯಲ್ಲಿ ಘೋಷಣೆಗಳನ್ನು ಕೂಗುತ್ತ ಸಹಾಯಕ ಆಯುಕ್ತ ಕಚೇರಿ ತಲುಪಿತು. ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿರುವ ಮೀನುಗಾರರು ಜ.6 ರೊಳಗೆ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕ್ರಮವಹಿಸದಿದ್ದಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯಿಂದ ಕರಾವಳಿ ಜಿಲ್ಲೆಗಳ 2ಲಕ್ಷಕ್ಕೂ ಅಧಿಕ ಮೀನುಗಾರರು ಪ್ರತಿಭಟನೆಯನ್ನು ನಡೆಸುವುದಾಗಿ ಮನವಿ ಪತ್ರದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.
ಡಿ.13ರಂದು 7ಮೀನುಗಾರರಿದ್ದ ಬೋಟೊಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದು ಎರಡು ದಿನಗಳ ನಂತರ ಡಿ.15ರಿಂದ ಮೀನುಗಾರರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಅದರ ನಂತರ ಇಂದಿನ ವರೆಗೆ ಅವರ ಪತ್ತೆಯೆ ಆಗಿಲ್ಲ. ನಾಪತ್ತೆಯಾಗಿರುವ 7 ಮೀನುಗಾರರ ಪೈಕಿ ಭಟ್ಕಳದ ಇಬ್ಬರು, ಕುಮಟಾದ ಇಬ್ಬರು ಹೊನ್ನಾವರದ ಒಬ್ಬರು ಮತ್ತು ಮಲ್ಲೆಯ ಇಬ್ಬರು ಮೀನುಗಾರರು ಸೇರಿದ್ದಾರೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.