ಶಬರಿಮಲೆ ದೇವಾಲಯ ಶುದ್ಧೀಕರಣ: ಎಐಡಿಡಬ್ಲ್ಯುಎ ಖಂಡನೆ
ಹೊಸದಿಲ್ಲಿ, ಜ. 3: ಋತುಚಕ್ರ ವಯಸ್ಸಿನ ಇಬ್ಬರು ಮಹಿಳೆಯರು ಪ್ರವೇಶಿಸಿದ ಬಳಿಕ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಶುದ್ಧೀಕರಣಗೊಳಿಸಿರುವುದಕ್ಕೆ ಎಐಡಿಡಬ್ಲ್ಯುಎ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ರೀತಿಯ ಆಚರಣೆಯನ್ನು ಮಾಡುವ ಮೂಲಕ ದೇವಾಲಯದ ಆಡಳಿತ ಮಂಡಳಿ ಮಹಿಳೆಯರನ್ನು ‘ಮಲಿನ’ ಹಾಗೂ ‘ಅಶುಚಿ’ ಎಂದು ಬಿಂಬಿಸಿದೆ ಹಾಗೂ ಅವರನ್ನು ತುಚ್ಛವಾಗಿ ಕಂಡಿದೆ ಎಂದು ಅದು ಹೇಳಿದೆ. ಶತಮಾನದ ಹಳೆಯ ಸಂಪ್ರದಾಯ ಉಲ್ಲಂಘಿಸಿ ಬುಧವಾರ ಇಬ್ಬರು ಮಹಿಳೆಯರು ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಿದ್ದರು. ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷಗಳ ನಡುವಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಚಾರಿತ್ರಿಕ ತೀರ್ಪು ನೀಡಿದ ಮೂರು ತಿಂಗಳ ಬಳಿಕ 44ರ ಹರೆಯದ ಕನಕದುರ್ಗ ಹಾಗೂ 42 ಹರೆಯದ ಬಿಂದು ಪೊಲೀಸರ ಬೆಂಗಾವಲಿನಲ್ಲಿ ದೇವಾಲಯ ಪ್ರವೇಶಿಸಿದ್ದರು.
ಮಹಿಳೆಯರು ದೇವಾಲಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ಶುದ್ಧೀಕರಣ ನಡೆಸಲು ಮುಖ್ಯ ಅರ್ಚಕರು ದೇವಾಲಯದ ಗರ್ಭ ಗುಡಿಯನ್ನು ಗಂಟೆಗಳ ಕಾಲ ಮುಚ್ಚಿದ್ದರು. ಶುದ್ಧೀಕರಣ ಆಚರಣೆ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತದೆ. ಅವರು ‘ಮಲಿನ’ ಹಾಗೂ ‘ಅಶುಚಿ’ ಎಂದು ಬಿಂಬಿಸುತ್ತದೆ. ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಎಂದು ಎಐಡಿಡಬ್ಲ್ಯುಎ ಹೇಳಿಕೆ ತಿಳಿಸಿದೆ. ಕೋಮು ಹಿಂಸಾಚಾರಕ್ಕೆ ಉತ್ತೇಜನ ನೀಡುವ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಷ್ಠಾನವನ್ನು ಬುಡಮೇಲುಗೊಳಿಸುವ ಬಲಪಂಥೀಯ ಸಂಘಟನೆಗಳ ಪ್ರಯತ್ನವನ್ನು ಎಐಡಿಡಬ್ಲ್ಯುಎ ಕಟುವಾಗಿ ಟೀಕಿಸಿದೆ.