ಅಂಜುಮನ್ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ: ವಿದ್ಯಾರ್ಥಿಗಳಿಂದ ಬೃಹತ್ ರ್ಯಾಲಿ

ಭಟ್ಕಳ, ಜ. 3: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯು ತನ್ನ ನೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2019ನೇ ವರ್ಷವನ್ನು ಶತಮಾನೋತ್ಸವ ಸಂಭ್ರಾಮಚಾರಣೆಗೆ ಮೀಸಲಿಟ್ಟಿದ್ದು ವಿದ್ಯಾರ್ಥಿಗಳ ಬೃಹತ್ ರ್ಯಾಲಿ ನಡೆಸುವುದರ ಮೂಲಕ ಶತಮಾನೋತ್ಸವ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಗುರುವಾರ ಮಧ್ಯಾಹ್ನ ಅಂಜುಮನಾಬಾದ್ ನಿಂದ ಆರಂಭಗೊಂಡ ಬೃಹತ್ ವಿದ್ಯಾರ್ಥಿ ರ್ಯಾಲಿ ಶಮ್ಸುದ್ದೀನ್ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಮೆರವಣೆಗೆಯಲ್ಲಿ ಸಂಸ್ಥೆಯ 22 ಶಾಲಾ ಕಾಲೇಜುಗಳು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾವಿರಾರು ಸಿಬ್ಬಂಧಿಗಳು, ಅಂಜುಮನ್ ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಹರ್ಷೋಲ್ಲಾಸದಿಂದ ಪಾಲ್ಗೊಂಡು ಅಂಜುಮನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂಭ್ರಾಮಾಚರಣೆಗ ಸಾಕ್ಷಿಯಾದರು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಶತಮಾನೋತ್ಸವ ಸಮಿತಿಯ ಸಂಚಾಲಕ ಎಂ.ಜೆ.ಅಬ್ದುಲ್ ರಖೀಬ್, ಅಬ್ದುಲ್ ರಹಮಾನ್ ಜಾನ್, ಅಂಜುಮನ್ ಮಾಜಿ ಅಧ್ಯಕ್ಷರು ಹಿರಿಯರು ಆಗಿರುವ ಡಿ.ಎಚ್.ಶಬ್ಬರ್ ಸೇರಿದಂತೆ ತಂಝೀಮ್ ಸಂಸ್ಥೆ, ಜಮಾಅತುಲ್ ಮುಸ್ಲಿಮೀನ್ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖಂಡರು ಮೆರವಣೆಗೆ ಭಾಗವಹಿಸಿ ಶತಮಾನೋತ್ಸವ ಸಂಭ್ರಮಕ್ಕೆ ಸಾಥ್ ನೀಡಿದರು.