ಪುತ್ತೂರು: ಒಮೆಗಾ ಪವರ್ ಟೆಕ್ನಾಲಜಿಸ್, ಸಲ್ವಾ ಕ್ರಿಯೇಶನ್ ಶುಭಾರಂಭ

ಪುತ್ತೂರು, ಜ. 3: ಇಲ್ಲಿನ ಎಂಟಿ ರಸ್ತೆಯಲ್ಲಿರುವ ಎ.ಎಚ್ ಸಿಟಿ ಮಾರ್ಕೆಟಿಂಗ್ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸಲ್ವಾ ಕ್ರಿಯೇಶನ್ ಮತ್ತು ಒಮೆಗಾ ಪವರ್ ಟೆಕ್ನೊಲೊಜೀಸ್ ಸಂಸ್ಥೆಯು ಗುರುವಾರ ಶುಭಾರಂಭಗೊಂಡಿದೆ. ಪುತ್ತೂರು ಜುಮಾ ಮಸೀದಿಯ ಮುದರ್ರಿಸರಾದ ಅಲ್‍ಹಾಜ್ ಅಸಯ್ಯದ್ ಅಹ್ಮದ್ ಪೂಕೋಯ ತಂಳರು ಪ್ರಾರ್ಥನೆ ನೆರವೇರಿಸುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇರಳ ಸರ್ಕಾರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಮುಹಮ್ಮದ್ ಬಶೀರುದ್ದೀನ್ ನಷ್ಕಾತಿ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಇಸ್ಲಾಂ ಹಲವಾರು ಕೊಡುಗೆಗಳನ್ನು ನೀಡಿದೆ. ಇತರ ಭಾಷೆಗಳಿಗೆ ಸೀಮಿತವಾಗಿರುವ ಅಂತಹ ಸಾಹಿತ್ಯಗಳನ್ನು ಕಡನ್ನ ಭಾಷೆಗೆ ಪರಿಚಯಿಸಬೇಕಾದ ಅಗತ್ಯವಿದೆ. ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.
ಯೋಜನೆ, ಯೋಚನೆ ಸಕಾರಾತ್ಮಕವಾಗಿರಲಿ: ನಾರಾಯಣ ರೈ ಕುಕ್ಕುವಳ್ಳಿ
ಹಿರಿಯ ಸಾಹಿತಿ, ಮಧು ಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ನಮ್ಮ ಯೋಜನೆ ಮತ್ತು ಯೋಚನೆಯು ಸಕಾರಾತ್ಮಕ ವಾಗಿದ್ದರೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಸಾಧ್ಯ. ನಾಡಿನ ಒಳಿತಿಗಾಗಿ ಮತ್ತು ಸೌಹಾರ್ದಯುತ ವಾತವರಣ ನಿರ್ಮಾಣಕ್ಕಾಗಿ ಪ್ರತಿಯೊಂದು ಸಂಸ್ಥೆಗಳು ಪಣತೊಟ್ಟರೆ ನಮ್ಮ ಊರು ಅಭಿವೃದ್ಧಿಯಾಗುತ್ತದೆ. ಜಾತಿ ಧರ್ಮವೆಂಬ ಭೇದಭಾವವನ್ನು ಮರೆತು ಪರಸ್ಪರ ಒಗ್ಗೂಡುವಂತಹ, ಒಂದೇ ಕುಟುಂಬದ ಸದಸ್ಯರಂತೆ ಸಂಗಮಿಸುವ ವಾತಾವರಣಗಳನ್ನು ನಿರ್ಮಿಸಿದರೆ ಆ ಸಂಸ್ಥೆಯು ಸಾರ್ಥಕ ಎಂದು ಅವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಜನರ ಬೇಡಿಕೆಗೆ ಸ್ಪಂದಿಸುವಂತಹ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ಅಶಾದಾಯಕ ಬೆಳವಣಿಗೆ. ನಾಡು ನುಡಿಯನ್ನು ಗೌರವಿಸುವಂತಹ ಯುವ ತಲೆಮಾರುಗಳು ಬೆಳೆದು ಬರುತ್ತಿದ್ದು, ಅಂತಹವರಿಗೆ ಪ್ರೋತ್ಸಾಹ ನೀಡುವಂತ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಸಾಹಿತ್ಯದಿಂದ ಸೌಹಾರ್ದ ಸಾಧ್ಯ: ಅನೀಸ್ ಕೌಸರಿ
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿ, ಸಾಹಿತ್ಯಗಳು ನಮ್ಮ ನಡೆ ನುಡಿಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಹಲವಾರು ಹಿರಿಯ ಸಾಹಿತಿಗಳು ತಮ್ಮ ಉತ್ತಮ ಬರಹಗಳ ಮೂಲಕ ಈ ನಾಡಿನಲ್ಲಿ ಸೌಹಾರ್ದ ಹಾಗೂ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಅಂಥವರ ಬರವಣಿಗೆಗಳಿಂದ ಪ್ರೇರಣೆಗೊಂಡು ಕೋಮುವಾದದ ಚಿಂತನೆಗಳಿಂದ ದೂರವುಳಿಯಲು ಸಾಧ್ಯವಾಗಿದೆ. ಸಾಹಿತ್ಯ, ಬರಹಗಳು ಸಮಾಜದ ಧ್ರುವೀಕರಣಕ್ಕಾಗಿ ದುರುಪಯೋಗವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಮಾಜವನ್ನು ಒಗ್ಗೂಡಿಸುವ ಬರಹಗಳು, ಪುಸ್ತಕಗಳು ಹೊರ ಬರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‍ನ ಅಧ್ಯಕ್ಷ ಕೆ.ಎಂ.ಎ. ಕೊಡುಂಗಾಯಿ, ಸುಳ್ಯ ರೇಂಜ್ ಜಂಇಯ್ಯತುಲ್ ಮುಲ್ಲಿಮೀನ್‍ನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಪುತ್ತೂರು ಜುಮಾ ಮಸೀದಿಯ ಅಬೂಬಕ್ಕರ್ ದಾರಿಮಿ ಕಟ್ಟತ್ತಾರ್, ಪುತ್ತೂರು ಎಸ್ಕೆಎಸ್ಸೆಸ್ಸೆಫ್ ವಲಯಧ್ಯಕ್ಷ ತಾಜುದ್ದೀನ್ ರಹ್ಮಾನಿ, ಸಂಘಟನಾ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ, ಮಾಣಿ ದಾರುಲ್ ಇರ್ಶಾದ್ ಕಾಲೇಜಿನ ಮುದರ್ರಿಸ್ ಯಕೂಬ್ ಸಅದಿ ಇರ್ದೆ, ಮುಂಡೋಳೆ ಮಸೀದಿ ಖತೀಬರಾದ ಅಬೂಬಕ್ಕರ್ ಸಅದಿ ಆತೂರು, ಪರ್ಪುಂಜ ಮಸೀದಿಯ ಅಬ್ದುಲ್ ರಹ್ಮಾನ್ ಝುಹರಿ, ಆಸಿಫ್ ಝುಹರಿ ಮಗಿರೆ, ಮುಫತ್ತಿಸ್ ಉಮ್ಮರ್ ದಾರಿಮಿ ಸಾಲ್ಮರ, ಪುತ್ತೂರು ಸಿಟಿ ಬಝಾರ್‍ನ ಮಾಲಕ ಹಸೈನಾರ್, ಶೀತಲ್ ಗಾರ್ಮೆಂಟ್ಸ್‍ನ ಮಾಲಕ ಉಮ್ಮರ್ ಪರ್ಲಡ್ಕ, ವಿ ಬಿಲ್ಡ್‍ನ ಇಬ್ರಾಹೀಂ ಅಲೆಕ್ಕಾಡಿ, ಪತ್ರಕರ್ತರಾದ ಸಿದ್ದೀಕ್ ಕುಂಬ್ರ, ಯೂಸುಫ್ ರೆಂಜಲಾಡಿ, ಅಬ್ದುಲ್ ರಹ್ಮಾನ್ ಹಾಜಿ ಅಲೆಕ್ಕಾಡಿ, ಒಮೆಗಾ ಪವರ್ ಟೆಕ್ನೊಲೊಜೀಸ್‍ನ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಜಿ.ಎಂ. ಗೋಳಿತ್ತಡಿ, ದರ್ಬೆ ಡಿಸೈನ್ ಹೌಸ್‍ನ ಶಾಫಿ ಪಾಪೆತ್ತಡ್ಕ, ಆದಂ ಹಾಜಿ ತುಳಸಿಯಡ್ಕ, ಯೂಸುಫ್ ಅಲೆಕ್ಕಾಡಿ, ಅಬ್ದುಲ್ ರಹ್ಮಾನ್ ಜಿ.ಎಂ ಮುಂಡೋಳೆ, ಶಾಫಿ ಬನ್ನೂರು, ಕುಂಬ್ರ ಕೆಐಸಿ ಸಂಸ್ಥೆಯ ವ್ಯವಸ್ಥಾಪಕ ಸತ್ತಾರ್ ಕೌಸರಿ, ಬಶೀರ್ ಕೌಡಿಚ್ಚಾರ್, ಹಮೀದ್ ಮಗಿರೆ, ಯೂಸುಫ್ ಮಗಿರೆ, ಒಮೆಗಾ ಫಾರಂನ ಮಾಲಿಕ ಅಬ್ದುಲ್ಲಾ ಜಿ.ಎಂ. ಮುಂಡೋಳೆ, ಶಾಫಿ ವಿಟ್ಲ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.