ರಾಜ್ಯ ಸಭೆ ಚುನಾವಣೆ ಗೆಲುವು ಪ್ರಕರಣ: ವಿಚಾರಣೆ ಎದುರಿಸುವಂತೆ ಅಹ್ಮದ್ ಪಟೇಲ್‌ಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಜ. 3: ಗುಜರಾತ್ ಉಚ್ಚ ನ್ಯಾಯಾಲಯದ ಆದೇಶದ ಮಧ್ಯೆ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, 2017ರ ರಾಜ್ಯ ಸಭಾ ಚುನಾವಣೆಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ರಿಗೆ ಗುರುವಾರ ಸೂಚಿಸಿದೆ.
ಅಹ್ಮದ್ ಪಟೇಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ನಾಯಕ ಬಲವಂತ್ ಸಿನ್ಹಾ ರಜಪೂತ್ ಅವರು ಪಟೇಲ್ ವಿರುದ್ಧ ದೂರು ದಾಖಲಿಸಿದ್ದರು. ‘‘ಈಗ ವಿಚಾರಣೆ ಮುಂದುವರಿಯಲು ಬಿಡಿ’’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠ ಹೇಳಿದೆ. ರಜಪೂತ್ ಅವರ ದೂರಿನ ಸಮರ್ಥನೀಯತೆಯನ್ನು ಪ್ರಶ್ನಿಸಿ ಪಟೇಲ್ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಗುಜರಾತ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಹಾಗೂ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೂ, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮರು ವಿಚಾರಣೆಗೆ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಹಿಂದೆ ಕಳುಹಿಸಿದೆ.
ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಂಡಾಯ ಶಾಸಕರಾದ ಭೋಲಾಭಾ ಗೋಯಲ್ ಹಾಗೂ ರಾಘವಜೀ ಪಟೇಲ್ ಮತಗಳನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿದ ಬಳಿಕ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಎರಡು ಮತಗಳನ್ನು ಅಸಿಂಧುಗೊಳಿಸಿದ ಬಳಿಕ ಪಟೇಲ್ ಅವರು ವಿಜಯಿಯಾಗಲು ಪಡೆಯಬೇಕಾದ ಮತಗಳ ಸಂಖ್ಯೆ 45ರಿಂದ 44ಕ್ಕೆ ಇಳಿಕೆಯಾಗಿತ್ತು. ಇಬ್ಬರು ಬಂಡಾಯ ಶಾಸಕರ ಮತಗಳನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿದ ನಿರ್ಧಾರವನ್ನು ರಜಪೂತ್ ಪ್ರಶ್ನಿಸಿದ್ದರು. ‘‘ಈ ಮತವನ್ನು ಲೆಕ್ಕ ಹಾಕಿದ್ದರೆ, ನಾನು ಪಟೇಲ್ ಅವರನ್ನು ಸೋಲಿಸುತ್ತಿದ್ದೆ’’ ಎಂದು ರಜಪೂತ್ ಹೇಳಿದ್ದರು. ಪಟೇಲ್ ಅವರನ್ನು ಕಾಂಗ್ರೆಸ್ ಚುನಾವಣೆಗೆ ಮುನ್ನ ಶಾಸಕರನ್ನು ಬೆಂಗಳೂರಿನಲ್ಲಿರುವ ರೆಸೋರ್ಟ್‌ಗೆ ಕರೆದೊಯ್ದು ಲಂಚ ನೀಡಿದ್ದಾರೆ ಎಂದು ಕೂಡ ರಜಪೂತ್ ಆರೋಪಿಸಿದ್ದರು.







