ದಾಖಲೆ 9ನೇ ಪ್ರಶಸ್ತಿ ಮೇಲೆ ಕಮಲ್ ಕಣ್ಣು
ಇಂದಿನಿಂದ ರಾಷ್ಟ್ರೀಯ ಟಿಟಿ ಚಾಂಪಿಯನ್‌ಶಿಪ್

ಕಟಕ್, ಜ.3: 80ನೇ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಶುಕ್ರವಾರದಿಂದ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಪ್ರಸಿದ್ಧ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ದಾಖಲೆಯ 9ನೇ ಬಾರಿ ಪುರುಷರ ವಿಭಾಗದ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕಿಳಿಯಲಿದ್ದಾರೆ. ಶರತ್ ಕಳೆದ ತಿಂಗಳು ವಿಶ್ವ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 30ನೇ ಸ್ಥಾನ ತಲುಪಿದ್ದರು. ಕಮಲೇಶ್ ಮೆಹ್ತಾ ಅವರ 8 ಪ್ರಶಸ್ತಿ ಗೆದ್ದ ದಾಖಲೆಯನ್ನು ಮುರಿಯಲು ಶರತ್‌ಗೆ ಪ್ರಸಕ್ತ ಟೂರ್ನಿಯಲ್ಲಿ ಅವಕಾಶವಿದೆ.
ಈ ದಾಖಲೆಯನ್ನು ಶರತ್ ಮುರಿದರೆ ಇತಿಹಾಸ ನಿರ್ಮಿಸುವುದಷ್ಟೇ ಅಲ್ಲದೆ ಬಹುದಿನಗಳ ನಂತರ ಈ ಸಾಧನೆಯ ಶಿಖರವೇರಿದ ಏಕೈಕ ಭಾರತೀಯ ಎನಿಸಿಕೊಳ್ಳಲಿದ್ದಾರೆ.
ಶರತ್‌ರ ಸಹ ಆಟಗಾರ ಜಿ.ಸತ್ಯನ್ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದು, ಐಟಿಟಿಎಫ್ ಶ್ರೇಯಾಂಕದಲ್ಲಿ ಶರತ್‌ಗಿಂತ ಒಂದು ಅಂಕ(31ನೇ ಸ್ಥಾನ) ಮಾತ್ರ ಹಿಂದಿದ್ದಾರೆ. ಸದ್ಯ ಸತ್ಯನ್ ಅವರು ಶರತ್‌ಗೆ ಪ್ರಮುಖ ಸವಾಲಾಗುವುದನ್ನು ನಿರೀಕ್ಷಿಸಲಾಗಿದೆ.
ಮಹಿಳಾ ವಿಭಾಗದ ಪ್ರಶಸ್ತಿ ರೇಸ್‌ನಲ್ಲಿ ಮಣಿಕಾ ಬಾತ್ರಾ ಫೇವರಿಟ್ ಆಟಗಾರ್ತಿಯಾಗಿದ್ದಾರೆ. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅವರು, ತಮ್ಮ ಸಾಧನೆಗೆ ಐಟಿಟಿಎಫ್‌ನ ವಾರ್ಷಿಕ ಪ್ರಶಸ್ತಿಯಾದ ‘ಬ್ರೆಕ್‌ಥ್ರೂ ಸ್ಟಾರ್’ ಗೌರವಕ್ಕೆ ಪಾತ್ರರಾಗಿದ್ದರು.







