ಪಕ್ಷದ ಗೆಲುವಿಗೆ ಮಹಿಳಾ ಕಾರ್ಯಕರ್ತರ ಶ್ರಮ ಅಗತ್ಯ: ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್
ಲೋಕಸಭಾ ಚುನಾವಣೆ

ಮಂಡ್ಯ,ಜ.3: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮಹಿಳಾ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಹಿಳಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, 2019ರಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡುವ ಸಂಕಲ್ಪ ಕೈಗೊಂಡು ಮತದಾರರ ಮನಸೆಳೆಯಲು ಕಾರ್ಯ ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳನ್ನು ಮತದಾರರಿಗೆ ತಿಳಿಸಿ, ಅವರನ್ನು ಜಾಗೃತಿಗೊಳಿಸಬೇಕಿದೆ. ಬಿಜೆಪಿಯವರ ಸುಳ್ಳು ಹೇಳಿಕೆಗಳು ಮತ್ತು ಜನರಿಗೆ ತಲುಪದ ಪೊಳ್ಳು ಯೋಜನೆಗಳನ್ನು ಎತ್ತಿಹಿಡಿದು ಅರಿವು ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.
ಪ್ರತಿ ಗ್ರಾಮದ ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇರುತ್ತಾರೆ. ಅವರ ಮೂಲಕ ಪ್ರತಿಯೊಬ್ಬರು 30 ಮನೆಗಳ ಜನರ ಸಮಸ್ಯೆಗಳನ್ನು ಕೇಳಿ, ಕಷ್ಟ-ಸುಖ ಮತ್ತು ಸೌಲಭ್ಯಗಳನ್ನು ತಲುಪಿಸುವಲ್ಲಿ ನೆರವು ನೀಡಬೇಕಿದೆ. ಆಗ ಮಾತ್ರ ಜನರು ಕಾಂಗ್ರೆಸ್ ಪಕ್ಷದ ಕಡೆ ಸ್ಪಂದಿಸುತ್ತಾರೆ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಮಹಿಳೆಯರಿಗೆ ರಾಜ್ಯ ಮಟ್ಟದಲ್ಲಿ ನಡೆದಿರುವ ಹೊಸ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮಿ, ಶುಭಧಾಯಿನಿ, ಪಲ್ಲವಿ, ಸುನೀತಾ, ಕಮಲ ಮತ್ತಿತರರಿದ್ದರು.







