ಮಧ್ಯಪ್ರದೇಶ ಪೊಲೀಸರಿಗೆ ಮೊದಲ ಬಾರಿಗೆ ವಾರದ ರಜೆ
![ಮಧ್ಯಪ್ರದೇಶ ಪೊಲೀಸರಿಗೆ ಮೊದಲ ಬಾರಿಗೆ ವಾರದ ರಜೆ ಮಧ್ಯಪ್ರದೇಶ ಪೊಲೀಸರಿಗೆ ಮೊದಲ ಬಾರಿಗೆ ವಾರದ ರಜೆ](https://www.varthabharati.in/sites/default/files/images/articles/2019/01/4/171177.gif)
ಭೋಪಾಲ್, ಜ.4: ಸಬ್ ಇನ್ಸ್ಪೆಕ್ಟರ್ ಉಮಾಶಂಕರ್ ಮಿಶ್ರಾ ಅವರಿಗೆ ಗುರುವಾರ 38 ವರ್ಷಗಳ ವೃತ್ತಿ ಇತಿಹಾಸದಲ್ಲೇ ಮೊದಲ ವಾರದ ರಜೆಯನ್ನು ಕುಟುಂಬದೊಂದಿಗೆ ಸಂತಸದಿಂದ ಕಳೆಯಲು ಅವಕಾಶ ಸಿಕ್ಕಿತು. ಇಂಥದ್ದೇ ಅವಕಾಶ ಮಧ್ಯಪ್ರದೇಶದ ಸಾವಿರಾರು ಪೊಲೀಸ್ ಸಿಬ್ಬಂದಿಗೆ ದೊರಕಿದೆ.
ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಅಧಿಕಾರಕ್ಕೆ ಬಂದ ಮೂರು ವಾರಗಳಲ್ಲಿ ಅನುಷ್ಠಾನಗೊಳಿಸಿದ್ದು, ರಾಜ್ಯದ ಪೊಲೀಸ್ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬ್ಬಂದಿ ಕಡ್ಡಾಯ ವಾರದ ರಜೆ ಪಡೆಯಲಿದ್ದಾರೆ.
ಇದುವರೆಗೆ ಮಧ್ಯಪ್ರದೇಶದಲ್ಲಿ ಪೊಲೀಸರು ವರ್ಷವಿಡೀ ವಾರದ ರಜೆ ಇಲ್ಲದೇ ಕೆಲಸ ಮಾಡಬೇಕಿತ್ತು. ಸಾಂದರ್ಭಿಕ ರಜೆ ಹಾಗೂ ಗಳಿಕೆ ರಜೆ ಹೊರತುಪಡಿಸಿದರೆ ವಾರದ ರಜೆ ಸೌಲಭ್ಯ ಇದುವರೆಗೆ ಇರಲಿಲ್ಲ. ಇದೀಗ ಹೊಸ ವರ್ಷದಂದು ಹೊರಡಿಸಿದ ಅಧಿಸೂಚನೆಯ ಅನ್ವಯ ಗುರುವಾರದಿಂದಲೇ ಈ ಸೌಲಭ್ಯವನ್ನು ಜಾರಿಗೊಳಿಸಿದೆ.
ಗುರುವಾರ ಮೊದಲ ವಾರದ ರಜೆ ಪಡೆದ ಬಹುತೇಕ ಪೊಲೀಸ್ ಅಧಿಕಾರಿಗಳು ಪಿಕ್ನಿಕ್ ತೆರಳಿದ್ದು ಕಂಡುಬಂತು. ಬಹಳಷ್ಟು ಪೊಲೀಸ್ ಅಧಿಕಾರಿಗಳು ಮಕ್ಕಳ ಶಾಲೆ ತಪ್ಪಿಸಿ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದರು.
"ಅತೀವ ಸಂತಸವಾಗುತ್ತಿದೆ. ನಾನು ಕುಟುಂಬದ ಜತೆ ವಾಸವಿದ್ದು, ಬಹಳಷ್ಟು ಬಾಕಿ ಕೆಲಸ ಪೂರ್ಣಗೊಳಿಸುವ ಪ್ರಯತ್ನ ಮಾಡಿದೆ. 1981ರಲ್ಲಿ ಸೇವೆಗೆ ಸೇರಿದ ಬಳಿಕ ನಾನು ತೆಗೆದುಕೊಂಡ ಮೊದಲ ವಾರದ ರಜೆ ಇದು" ಎಂದು ಹಬೀಬ್ಗಂಜ್ ಠಾಣೆಯ ಅಧಿಕಾರಿಯಾಗಿರುವ ಮಿಶ್ರಾ ವಿವರಿಸಿದರು.
"ಇದು ಒತ್ತಡದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಇಂದು ನನ್ನ ಇಡೀ ಕುಟುಂಬ ನನ್ನ ಜತೆಗಿತ್ತು. ನನ್ನ ಮಕ್ಕಳು ಬೆಳೆದಿದ್ದಾರೆ. ಸೊಸೆಯಂದಿರೂ ಇದ್ದರು. ಇಂದು ನಿಜಕ್ಕೂ ನಮ್ಮದು ಕುಟುಂಬವಾಗಿ ಕಂಡುಬಂತು" ಎಂದು ಸಂತಸ ಹಂಚಿಕೊಂಡರು. ರಾಜ್ಯಾದ್ಯಂತ 30 ವರ್ಷಕ್ಕೂ ಹೆಚ್ಚು ಕಾಲ ವಾರದ ರಜೆ ಪಡೆಯದಿದ್ದ ನೂರಾರು ಪೊಲೀಸ್ ಅಧಿಕಾರಿಗಳು ಇಂಥದ್ದೇ ಅನುಭವ ಹಂಚಿಕೊಂಡಿದ್ದಾರೆ.