ಧೋನಿ ದಾಖಲೆ ಮುರಿದ ಪಂತ್

ಸಿಡ್ನಿ, ಜ.4: ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಆಸ್ಟ್ರೇಲಿಯ ವಿರುದ್ಧ 4ನೇ ಕ್ರಿಕೆಟ್ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಔಟಾಗದೆ 159 ರನ್ ಗಳಿಸುವ ಮೂಲಕ ಭಾರತದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದಿದ್ದಾರೆ.
ಪಂತ್ ಅವರು 189 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಔಟಾಗದೆ 159 ರನ್ ಗಳಿಸಿದರು.ಟೆಸ್ಟ್ ನ 2ನೇ ದಿನವಾಗಿರುವ ಶುಕ್ರವಾರ ಪಂತ್ ಅವರು 149 ರನ್ ಗಳಿಸುತ್ತಿದಂತೆ ಧೋನಿ ದಾಖಲೆಯನ್ನು ಮುರಿದರು. ಧೋನಿ 2006ರಲ್ಲಿ ಫೈಸಲಾಬಾದ್ ನಲ್ಲಿ ಪಾಕಿಸ್ತಾನ ವಿರುದ್ಧ 148 ರನ್ ಗಳಿಸಿದ್ದರು. ಇದು ಭಾರತದ ವಿಕೆಟ್ ಕೀಪರ್ ವಿದೇಶದಲ್ಲಿ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿತ್ತು.
ಪಂತ್ ಇನ್ನೊಂದು ರನ್ ಗಳಿಸಿದ್ದರೆ ಏಶ್ಯದ ವಿಕೆಟ್ ಕೀಪರ್ ಉಪಖಂಡದ ಹೊರಗೆ ನಿರ್ಮಿಸಿದ ದಾಖಲೆಯನ್ನು ಮುರಿಯುವ ಅವಕಾಶ ಇತ್ತು. ಬಾಂಗ್ಲಾದ ವಿಕೆಟ್ ಕೀಪರ್ ಮುಶ್ಫೀ ಕುರ್ರಹೀಂ 2017ರಲ್ಲಿ ವೆಲ್ಲಿಂಗ್ಟನ್ ನಲ್ಲಿ ನ್ಯೂಝಿಲೆಂಡ್ ವಿರುದ್ಧ 159 ರನ್ ಗಳಿಸಿದ್ದರು. ಆ ದಾಖಲೆಯನ್ನು ಪಂತ್ ಇದೀಗ ಸರಿಗಟ್ಟಿದ್ದಾರೆ..
ಪಂತ್ ಆಸ್ಟ್ರೇಲಿಯ ನೆಲದಲ್ಲಿ ಶತಕ ದಾಖಲಿಸಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಇದು ಅವರ ಎರಡನೇ ಶತಕವಾಗಿದೆ. ಭಾರತದ ಫಾರೂಕ್ ಇಂಜಿನಿಯರ್ 1967ರಲ್ಲಿ ಆಡಿಲೇಡ್ ನಲ್ಲಿ 89 ರನ್ ಗಳಿಸಿದ್ದರು. ಇದು ಭಾರತದ ವಿಕೆಟ್ ಕೀಪರ್ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿತ್ತು.
ಭಾರತ 622/7 ಡಿಕ್ಲೇರ್ : ಭಾರತ ಮೊದಲ ಇನಿಂಗ್ಸ್ ನಲ್ಲಿ 167.2 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 622 ರನ್ ಗಳಿಸಿದ್ದು ಇನಿಂಗ್ಸ್ ಡಿಕ್ಲೇರ್ ಮಾಡಿದೆ. ರವೀಂದ್ರ ಜಡೇಜ (81) ಶತಕ ಮತ್ತು ಚೇತೇಶ್ವರ ಪೂಜಾರ (193) ದ್ವಿಶತಕ ವಂಚಿತಗೊಂಡಿದ್ದಾರೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.







